ಕೋಲಾರ: ಮಂಗಳವಾರ ರಾತ್ರಿ ನಡೆದಿರುವ ನರಸಾಪುರ ಯಲ್ಲೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು ಕೊಲೆ ಆರೋಪಿ ಎಂದು ಶಂಕಿಸಲಾಗಿದ್ದ ಸಂತೋಷ್‌ನ ಪುತ್ರ ಬಿಂದುಕುಮಾರ್ ಫೇಸ್‌ಬುಕ್ ಲೈವ್ ವೀಡಿಯೊ ಮೂಲಕ ಆತ್ಮರಕ್ಷಣೆಗೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನನ್ನ ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿ ನಮ್ಮಿಂದ ದೂರ ಮಾಡಿ ಮದುವೆ ಮಾಡಿಕೊಂಡಿದ್ದ ಯಲ್ಲೇಶ್ ನನ್ನ ತಂಗಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ. ನನ್ನ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ನನ್ನ ಮೇಲೆಯೂ ಐದು ಬಾರಿ ಕೊಲೆ ಯತ್ನ ಮಾಡಿದ್ದ ಎಂದು ದೋಷಾರೋಪ ಮಾಡಿದ್ದಾನೆ.
ಇವೆಲ್ಲ ಕುರಿತು ಪೊಲೀಸ್ ಠಾಣೆಯಲ್ಲಿ ಐದು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಮತ್ತೆ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾನೆ ಎಂಬ ಮಾಹಿತಿ ದೊರೆತ ಕಾರಣ ಆತ್ಮರಕ್ಷಣೆಗೆ ನಾನು ಮತ್ತು ನನ್ನ ಸ್ನೇಹಿತ ಅಕ್ಷಯ್ ಮತ್ತು ಅವನ ಅಣ್ಣ ಸೇರಿ ಕೊಲೆ ಮಾಡಿದ್ದೇವೆ ಎಂದು ವಿವರಿಸಿದ್ದಾನೆ.
ಯಲ್ಲೇಶ್ ತಲೆಗೆ ಕಲ್ಲು ಎಸೆದು ಕೊಲೆ ಮಾಡಲಾಗಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ ಆತ “ಅದು ಸತ್ಯವಲ್ಲ. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ” ಎಂದು ಹೇಳಿದ್ದಾನೆ. “ಕೊಲೆಗೆ ಬಳಸಿದ ಮಚ್ಚು ಸಹಿತ ನ್ಯಾಯಾಲಯದಲ್ಲಿ ಶರಣಾಗುತ್ತೇವೆ” ಎಂದು ಬಿಂದುಕುಮಾರ್ ತನ್ನ ವೀಡಿಯೊದಲ್ಲಿ ತಿಳಿಸಿದ್ದಾನೆ.























