Home Advertisement
Home ನಮ್ಮ ಜಿಲ್ಲೆ ಚಾಮರಾಜನಗರ ಮದುಮಗನಿಗೆ ಚಾಕು ಇರಿತ: ಭಯದಿಂದ ಮದುವೆ ಬೇಡವೆಂದ ವರ

ಮದುಮಗನಿಗೆ ಚಾಕು ಇರಿತ: ಭಯದಿಂದ ಮದುವೆ ಬೇಡವೆಂದ ವರ

0
4

ಕೊಳ್ಳೇಗಾಲ: ಮದುವೆ ಛತ್ರಕ್ಕೆ ಬರುತ್ತಿದ್ದ ಮದು ಮಗನಿಗೆ ಚಾಕು ಇರಿತವಾದ ಘಟನೆ ಪಟ್ಟಣದಲ್ಲಿ ನಡೆದಿದ್ದು, ಗಾಯಗೊಂಡಿರುವ ಮದುಮಗನು ಭಯದಿಂದ ಮದುವೆ ಬೇಡವೆಂದು ಹಠ ಹಿಡಿದಿದ್ದಾನೆ.

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಯುವಕ ರವೀಶ್ ಗಾಯಗೊಂಡವರು.

ಘಟನೆಯ ವಿವರ: ರವೀಶ್ ಹಾಗೂ ಕೊಳ್ಳೇಗಾಲ ತಾಲೂಕಿನ ಗ್ರಾಮವೊಂದರ ಯುವತಿ ನಡುವೆ ಜ. 29 ಹಾಗೂ 30ರಂದು ನಗರದ ಶ್ರೀವೆಂಕಟೇಶ್ವರ ಮಹಲ್ ಛತ್ರದಲ್ಲಿ ಮದುವೆ ನಿಗದಿಯಾಗಿತ್ತು.

ಮದುವೆಗೆ ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಮದುಮಗ ರವೀಶ್ ತನ್ನ ಕುಟುಂಬದವರೊಡನೆ ಛತ್ರಕ್ಕೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ರವೀಶ್ ತನ್ನ ಎಡಗೈ ಅನ್ನು ಕಾರಿನ ಮುಂಭಾಗದ ಕಿಟಕಿ ಮೇಲೆ ಇಟ್ಟುಕೊಂಡಿದ್ದನು. ಇದನ್ನು ಗಮನಿಸಿರುವ ದುರ್ಷ್ಕಮಿಗಳು ಮತ್ತೊಂದು ಕಾರಿನಲ್ಲಿ ವೇಗವಾಗಿ ಬಂದು ಚಲಿಸುತ್ತಿದ್ದ ಕಾರಿನಲ್ಲಿಯೇ ರವೀಶ್‌ನ ಎಡಗೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಕುಟುಂಬಸ್ಥರು ರವೀಶ್‌ನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮದುವೆ ಬೇಡವೆಂದ ವರ: ಘಟನೆಯಿಂದ ಗಾಬರಿಗೊಂಡಿರುವ ಮದುಮಗ ರವೀಶ್ ಪೊಲೀಸರೊಂದಿಗೆ ನನಗೆ ಜೀವ ಭಯವಿದೆ. ನನಗೆ ಮದುವೆ ಬೇಡ, ನನ್ನನ್ನು ಬೇರೆಡೆಗೆ ಕಳುಹಿಸಿಕೊಡಿ ಎಂದು ಹಠ ಹಿಡಿದಿದ್ದಾನೆ. ಅತ್ತ ಯುವತಿ ನಾನು ರವೀಶ್‌ನನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಎರಡು ಕುಟುಂಬಗಳು ಈ ಬಗ್ಗೆ ಮಾತುಕತೆ ನಡೆಸುತ್ತಿದ್ದು, ಮದುವೆ ನಡೆಸುವುದೋ ಅಥವಾ ಬೇಡವೋ ಎಂಬ ಚರ್ಚೆ ನಡೆಯುತ್ತಿದೆ.

ಅಪರಿಚಿತನಿಂದ ವರನಿಗೆ ಧಮಕಿ: ರವೀಶ್ ಹಾಗೂ ಯುವತಿ ನಡುವೆ 6 ತಿಂಗಳ ಹಿಂದೆ ಎಗೇಜ್‌ಮೆಂಟ್ ನಡೆದಿತ್ತು. ಇದಾದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಆಗಾಗ ರವೀಶ್‌ನಿಗೆ ದೂರವಾಣಿ ಕರೆ ಮಾಡಿ ಮದುವೆ ಮಾಡಿಕೊಳ್ಳಬೇಡ ಎಂದು ಧಮಕಿ ಹಾಕುತ್ತಿದ್ದನು. ಈ ಬಗ್ಗೆ ರವೀಶ್ ಯುವತಿ ಹಾಗೂ ಕುಟುಂಬದವರನ್ನು ಕೇಳಿದಾಗ ಆತ ಯಾರೆಂದು ನನಗೆ ಗೊತ್ತಿಲ್ಲ. ನಮಗೆ ಈ ಮದುವೆ ಇಷ್ಟವಿದೆ ಎಂದು ರವೀಶ್ ಹಾಗೂ ಕುಟುಂಬದವರಿಗೆ ಹೇಳಿದ್ದರು. ಹೀಗಾಗಿ, ಮದುವೆ ತಯಾರಿ ಮಾಡಿಕೊಂಡಿದ್ದೇವು ಎಂದು ರವೀಶ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಚಾಕು ಇರಿದವರು ಯಾರು?: ಮದುಮಗನಿಗೆ ಚಾಕು ಇರಿದ ಘಟನೆ ವಿಚಾರ ತಿಳಿಯುತ್ತಿದ್ದಂತೆ ಯಾರು ಚಾಕು ಇರಿದಿದ್ದು, ಅವರಿಗೂ ಮದುವೆಗೂ ಏನೂ ಸಂಬಂಧ ಎಂಬ ಪ್ರಶ್ನೆ ಮದುವೆ ಮನೆಯಲ್ಲಿ ಚರ್ಚೆಯಾಗುತ್ತಿತ್ತು. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ, ದುರ್ಷ್ಕಮಿಗಳನ್ನು ಶೀಘ್ರವೇ ಬಂಧಿಸಬೇಕು. ಯುವಕ – ಯುವತಿ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Previous articleದಾವಣಗೆರೆ ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್
Next articleಹತ್ಯೆ ಪ್ರಕರಣಕ್ಕೆ ಟ್ವಿಸ್ಟ್:‌ ಕೊಂದಿದ್ದು ನಾನೇ ಎಂದು ಫೇಸ್ಬುಕ್‌ ಲೈವ್‌!