ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವ ನಡುವೆಯೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಸುಪ್ರೀಂ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಹಲವು ಪ್ರಮುಖ ವಿಷಯಗಳ ಕುರಿತು ಗಹನವಾದ ಚರ್ಚೆ ನಡೆಸಿದ್ದಾರೆ.
ಈ ಭೇಟಿಯು ರಾಜಕೀಯ ವಲಯದಲ್ಲಿ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದ್ದು, ಎನ್‌ಡಿಎ ಮೈತ್ರಿಕೂಟದ ಒಳಗಿನ ಸಮನ್ವಯ, ಮುಂದಿನ ರಾಜಕೀಯ ತಂತ್ರಗಳು ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆದಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ರಾಜೀನಾಮೆ ಕುರಿತು ಸದನದಲ್ಲಿ ಕೆ.ಜೆ. ಜಾರ್ಜ್ ಸ್ಪಷ್ಟನೆ
ಈ ಕುರಿತಂತೆ ಸಾಮಾಜಿಕ ಜಾಲತಾನದಲ್ಲಿ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ: ಈ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಹೆಚ್.ಡಿ. ದೇವೇಗೌಡ ಅವರೊಂದಿಗೆ ತೆಗೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ದೇವೇಗೌಡರ ಬಗ್ಗೆ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ, “ಶ್ರೀ ಹೆಚ್.ಡಿ. ದೇವೇಗೌಡ ಅವರೊಂದಿಗೆ ಅದ್ಭುತವಾದ ಭೇಟಿ ನಡೆಯಿತು. ಪ್ರಮುಖ ವಿಷಯಗಳ ಕುರಿತು ಅವರಿಗಿರುವ ದೃಷ್ಟಿಕೋನ ಮತ್ತು ಅನುಭವಗಳು ಗಮನಾರ್ಹವಾಗಿವೆ. ಭಾರತದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಉತ್ಸಾಹವು ನಿಜಕ್ಕೂ ಪ್ರಶಂಸನೀಯ” ಎಂದು ತಮ್ಮ ಸಂದೇಶದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: UGC ಇಕ್ವಿಟಿ ನಿಯಮಗಳು ‘ವಿಳಂಬವಾದರೂ ಸ್ವಾಗತಾರ್ಹ’ : ಸ್ಟಾಲಿನ್
ಅನುಭವ, ದೃಷ್ಟಿಕೋನದ ಕುರಿತು ಚರ್ಚೆ: ಭಾರತದ ರಾಜಕಾರಣದಲ್ಲಿ ದಶಕಗಳ ಅನುಭವ ಹೊಂದಿರುವ ಹಿರಿಯ ನಾಯಕ ಹೆಚ್.ಡಿ. ದೇವೇಗೌಡ ಅವರು, ದೇಶದ ಕೃಷಿ, ಗ್ರಾಮೀಣಾಭಿವೃದ್ಧಿ, ಫೆಡರಲ್ ವ್ಯವಸ್ಥೆ, ರಾಜ್ಯ–ಕೇಂದ್ರ ಸಂಬಂಧಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿರುವವರು. ಇಂತಹ ಅನುಭವಸಂಪನ್ನ ನಾಯಕನೊಂದಿಗೆ ಪ್ರಧಾನಮಂತ್ರಿ ನಡೆಸಿದ ಚರ್ಚೆ ರಾಷ್ಟ್ರದ ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ್ದಾಗಿರಬಹುದು ಎಂದು ರಾಜಕೀಯ ವಲಯ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.
ಜೆಡಿಎಸ್–ಎನ್‌ಡಿಎ ಸಂಬಂಧಕ್ಕೆ ಮಹತ್ವ: ಈ ಭೇಟಿ, ಜೆಡಿಎಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಬಂಧದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಕರ್ನಾಟಕ ರಾಜಕಾರಣದಲ್ಲಿ ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಅಂಗವಾಗಿದ್ದು, ಮುಂಬರುವ ರಾಜಕೀಯ ಸವಾಲುಗಳು ಹಾಗೂ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಹಕಾರದ ವಿಚಾರಗಳ ಬಗ್ಗೆ ಚರ್ಚೆ ನಡೆದಿರಬಹುದೆಂದು ಊಹಿಸಲಾಗಿದೆ.
ಇದನ್ನೂ ಓದಿ: ಮಂಗಳೂರು: ಕಾಮಗಾರಿಗಳಿಗೆ ಅನುದಾನ ಕೊರತೆ
ಒಟ್ಟಾರೆ, ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಈ ಭೇಟಿ, ಅನುಭವ ಮತ್ತು ಆಡಳಿತದ ಸಂವಾದದ ಸಂಕೇತವಾಗಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.




















