ಕವಿತಾಳ: ಕೌಟುಂಬಿಕ ಕಲಹ ಮತ್ತು ದೌರ್ಜನ್ಯ ಮಾನವೀಯತೆಯ ಎಲ್ಲ ಮಿತಿಗಳನ್ನು ಮೀರಿ ಹೋಗಿರುವ ಹೃದಯವಿದ್ರಾವಕ ಘಟನೆ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಹಣಗಿ ಗ್ರಾಮದಲ್ಲಿ ನಡೆದಿದೆ. ಮಾವನೇ ತನ್ನ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಅಮಾನವೀಯ ಕೃತ್ಯ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.
ಈ ದುರ್ಘಟನೆಯಲ್ಲಿ ರೇಖಾ (24) ಎಂಬ ಯುವತಿ ದುರಂತ ಸಾವನ್ನಪ್ಪಿದ್ದಾಳೆ. ಈ ಕೃತ್ಯ ಎಸಗಿದ ಆರೋಪಿಯಾದ ರೇಖಾಳ ಮಾವ, ಅಂದರೆ ಗಂಡನ ತಂದೆಯಾದ ಸಿದ್ದಪ್ಪ ತಂದೆ ದುರುಗಪ್ಪ ಎಂಬಾತನನ್ನು ಕವಿತಾಳ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ಕುರಿತು ಸದನದಲ್ಲಿ ಕೆ.ಜೆ. ಜಾರ್ಜ್ ಸ್ಪಷ್ಟನೆ
ಕೌಟುಂಬಿಕ ಕಲಹವೇ ಕೊಲೆಗೆ ಕಾರಣ: ಮೃತ ರೇಖಾ ಅವರನ್ನು ಮೂರು ವರ್ಷಗಳ ಹಿಂದೆ ಹಿರೇಹಣಗಿ ಗ್ರಾಮದ ನಾಗರಾಜ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ನಾಗರಾಜ ರೇಖಾಳ ತಾಯಿಯ ತಂಗಿಯ ಮಗನಾಗಿದ್ದು, ಸಂಬಂಧಿಕರ ಮದುವೆಯಾಗಿತ್ತು. ಆರಂಭದ ಆರು ತಿಂಗಳ ಕಾಲ ಗಂಡ ಮತ್ತು ಆತನ ಕುಟುಂಬದವರು ಚೆನ್ನಾಗಿಯೇ ವರ್ತಿಸಿದ್ದರು ಎನ್ನಲಾಗಿದೆ.
ಆದರೆ ನಂತರದ ದಿನಗಳಲ್ಲಿ ಹೊಲ ಮತ್ತು ಮನೆ ಕೆಲಸದ ವಿಚಾರವಾಗಿ ರೇಖಾಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಈ ಕಿರುಕುಳ ತಾಳಲಾರದೆ ರೇಖಾ ಮತ್ತು ಆಕೆಯ ಗಂಡ ನಾಗರಾಜ ಹಿರೇಹಣಗಿಯಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ವಾಸ ಆರಂಭಿಸಿದ್ದರು.
ಇದನ್ನೂ ಓದಿ: UGC ಇಕ್ವಿಟಿ ನಿಯಮಗಳು ‘ವಿಳಂಬವಾದರೂ ಸ್ವಾಗತಾರ್ಹ’ : ಸ್ಟಾಲಿನ್
ಪ್ರತ್ಯೇಕ ವಾಸದಲ್ಲೂ ಹಿಂಸೆ ನಿಲ್ಲಲಿಲ್ಲ: ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಆರೋಪಿ ಸಿದ್ದಪ್ಪ ಅಲ್ಲಿಗೂ ಬಂದು ಜಗಳ ಮಾಡುತ್ತಿದ್ದನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ನಡುವೆ ರೇಖಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರಿಂದ, ಹೆರಿಗೆ ಹಾಗೂ ಆರೈಕೆಗೆಂದು ಆಕೆಯ ಪೋಷಕರು ತವರು ಮನೆಯಾದ ಚಿಕ್ಕಹಣಗಿಗೆ ಕರೆದುಕೊಂಡು ಬಂದಿದ್ದರು.
ತವರು ಮನೆಯಲ್ಲಿದ್ದರೂ ಆರೋಪಿ ಸಿದ್ದಪ್ಪ ಆಗಾಗ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದನೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು ದಸರಾಕ್ಕೆ ₹5 ಕೋಟಿ ಅನುದಾನ ಘೋಷಿಸಲು ಮನವಿ
ಒಬ್ಬಳೆ ಇದ್ದಾಗ ಮನೆಗೆ ನುಗ್ಗಿ ಹತ್ಯೆ: ಜನವರಿ 28, 2026ರಂದು, ರೇಖಾ ತವರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಆರೋಪಿ ಸಿದ್ದಪ್ಪ, ಮನೆಗೆ ಒಳನುಗ್ಗಿ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ರೇಖಾಳ ಮುಖಕ್ಕೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರೇಖಾ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದಿದ್ದು, ಪಕ್ಕದ ಮನೆಯ ಯಲ್ಲಮ್ಮ ಅವರ ಮನೆಯ ಮುಂದಿನ ಕಟ್ಟೆಯ ಮೇಲೆ ಬಿದ್ದು ಕೊನೆಯುಸಿರೆಳೆದಿದ್ದಾಳೆ. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಪ್ರಕರಣ ದಾಖಲು – ಆರೋಪಿ ಬಂಧನ: ಈ ಘಟನೆಗೆ ಸಂಬಂಧಿಸಿದಂತೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 06/2026 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 85, 115(2), 351(2), 352, 103(1) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿ ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸರಣಿ ಅಪಘಾತ: ನಟ ಮಯೂರ್ ಪಟೇಲ್ ವಿರುದ್ಧ FIR
ಗ್ರಾಮದಲ್ಲಿ ಶೋಕ ಮತ್ತು ಆಕ್ರೋಶ: ಒಂದೇ ಕುಟುಂಬದೊಳಗಿನ ಈ ಭೀಕರ ಕೊಲೆ ಪ್ರಕರಣವು ಚಿಕ್ಕಹಣಗಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶೋಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಗರ್ಭಿಣಿ ಯುವತಿಯ ಮೇಲೆ ನಡೆದ ಈ ಕ್ರೂರ ಕೃತ್ಯಕ್ಕೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.























