ವಿಲಾಸ ಜೋಶಿ
ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಎಂದರೆ ಸದಾ ವಿವಾದ, ಹೇಳಿಕೆ ಮತ್ತು ಪ್ರತಿ ಹೇಳಿಕೆಗಳ ನೆನಪು ಬರುತ್ತದೆ. ಆದರೆ ಇವುಗಳ ಮಧ್ಯೆಯೇ ಬೆಳಗಾವಿಯೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡ ಕೆಲವೇ ಮಹಾರಾಷ್ಟ್ರದ ನಾಯಕರು ಇದ್ದಾರೆ. ಅವರ ಸಾಲಿನಲ್ಲಿ ಮಹಾರಾಷ್ಟ್ರಉಪಮುಖ್ಯಮಂತ್ರಿ ಅಜಿತ್ ಪವಾರ್ ಒಬ್ಬರು.
ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಬೆಳಗಾವಿಯ ಅಭಿವೃದ್ಧಿ, ವ್ಯಾಪಾರ ಮತ್ತು ಜನಜೀವನಕ್ಕೆ ಸಂಬಂಧಿಸಿ ದಂತೆ ಪವಾರ್ ಅವರ ನಿಲುವು ಪ್ರಾಯೋಗಿಕವಾಗಿಯೇ ಇತ್ತು.
ಗಡಿ ಎಂದರೆ ಅಡ್ಡಗೋಡೆ ಅಲ್ಲ, ಸಹಕಾರಕ್ಕೆ ಸೇತುವೆಯಾಗಬೇಕು ಎಂಬ ಭಾವನೆ ಅವರ ನಡೆ-ಮಾತುಗಳಲ್ಲಿ ಅನಾವರಣಗೊಂಡಿತ್ತು. ಬೆಳಗಾವಿ ಮತ್ತು ಪಕ್ಕದ ಮಹಾರಾಷ್ಟ್ರ ಜಿಲ್ಲೆಗಳ ನಡುವಿನ ವ್ಯಾಪಾರ, ಕೃಷಿ ಮತ್ತು ಕಾರ್ಮಿಕ ಸಂಬಂಧಗಳು ದಶಕಗಳಿಂದ ಬೆಸೆದುಕೊಂಡಿವೆ. ಸಕ್ಕರೆ ಕಾರ್ಖಾನೆಗಳು, ಹಾಲು ಉತ್ಪಾದನೆ, ಕೃಷಿ ಮಾರುಕಟ್ಟೆಗಳು ಈ ಎಲ್ಲ ಕ್ಷೇತ್ರಗಳಲ್ಲಿ ಗಡಿ ಎನ್ನುವುದು ಕಾಗದದ ರೇಖೆಯಷ್ಟೇ.
ಅಜಿತ್ ಪವಾರ್ ಅವರು ಈ ವಾಸ್ತವ ವನ್ನು ಅನೇಕ ಬಾರಿ ಸಾರ್ವಜನಿಕವಾಗಿ ಒಪ್ಪಿಕೊಂಡು `ಎರಡು ರಾಜ್ಯಗಳ ರೈತರು ಎದುರಿಸುವ ಸಮಸ್ಯೆಗಳು ಒಂದೇ’ ಎಂಬ ನಿಲುವು ವ್ಯಕ್ತಪಡಿಸಿದ್ದರು. ಗಡಿ ವಿಚಾರ ರಾಜಕೀಯವಾಗಿ ಸಂವೇದನಾಶೀಲವಾಗಿದ್ದರೂ, ಆಡಳಿತಾತ್ಮಕ ಸಹಕಾರಕ್ಕೆ ಅದು ಅಡ್ಡಿಯಾಗಬಾರದು ಎಂಬುದೇ ಅಜಿತ್ ಪವಾರ್ ಅವರ ವಾಸ್ತವಿಕ ರಾಜಕೀಯ ಧೋರಣೆಯಾಗಿತ್ತು.
ನೀರಾವರಿ, ಸಾರಿಗೆ, ರಸ್ತೆ ಸಂಪರ್ಕ ಮತ್ತು ವ್ಯಾಪಾರ ಸುಗಮತೆ ಈ ವಿಷಯಗಳಲ್ಲಿ ಬೆಳಗಾವಿ-ಮಹಾರಾಷ್ಟ್ರ ನಡುವಿನ ಸಂವಾದ ಮುಂದುವರಿಯಬೇಕು ಎಂಬ ಅಭಿಪ್ರಾಯವನ್ನು ಅವರು ಹಲವು ಸಂದರ್ಭಗಳಲ್ಲಿ ಸೂಚಿಸಿದ್ದರು.
ಮರಾಠಿ-ಕನ್ನಡ ಸಂಸ್ಕೃತಿಗಳು ಬೆಳಗಾವಿಯಲ್ಲಿ ಮುಖಾಮುಖಿಯಾಗಿಲ್ಲ; ಅವು ಪರಸ್ಪರ ಬೆಸೆದುಕೊಂಡಿವೆ. ಹಬ್ಬ, ಆಹಾರ, ಭಾಷೆ ಎಲ್ಲವೂ ಇಲ್ಲಿ ಸಹಜ ಸಂಗಮ. ಈ ಸಾಂಸ್ಕೃತಿಕ ವಾಸ್ತವವನ್ನು ಅರ್ಥಮಾಡಿಕೊಂಡ ರಾಜಕೀಯ ನಾಯಕತ್ವವೇ ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಬಲ್ಲದು. ಅಜಿತ್ ಪವಾರ್ ಅವರ ನಿಲುವುಗಳಲ್ಲೂ ಈ ಅರಿವು ಕಾಣಿಸುತ್ತದೆ.






















