Home Advertisement
Home ನಮ್ಮ ಜಿಲ್ಲೆ ಧಾರವಾಡ: ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ

ಧಾರವಾಡ: ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ

0
8

ಧಾರವಾಡ : ಶೈಕ್ಷಣಿಕ ನಗರಿ ಎಂದೇ ಖ್ಯಾತಿ ಪಡೆದಿರುವ ಧಾರವಾಡದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ, ನಗರದ ಪ್ರತಿಷ್ಠಿತ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (DIMHANS)ಯ ಹಾಸ್ಟೆಲ್‌ನಲ್ಲಿ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ (24) ಮೃತ ವಿದ್ಯಾರ್ಥಿನಿಯಾಗಿದ್ದಾರೆ. ಇವರು ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರ (Psychiatry) ವಿಭಾಗದ ಪ್ರಥಮ ವರ್ಷದ ಪಿಜಿ ವಿದ್ಯಾರ್ಥಿನಿಯಾಗಿ ಕೇವಲ ಎರಡು ವಾರಗಳ ಹಿಂದಷ್ಟೇ ವ್ಯಾಸಂಗ ಆರಂಭಿಸಿದ್ದರು ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ:  ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನ

ಅತ್ಯಂತ ನೋವಿನ ಸಂಗತಿಯೆಂದರೆ, ಡಾ. ಪ್ರಜ್ಞಾ ಅವರ ಪೋಷಕರು ಮಗಳನ್ನು ಭೇಟಿಯಾಗಲು ನಿನ್ನೆಯಷ್ಟೇ ಧಾರವಾಡಕ್ಕೆ ಆಗಮಿಸಿದ್ದರು. ಮಗಳೊಂದಿಗೆ ಸಮಯ ಕಳೆದು, ರಾತ್ರಿ ಶಿವಮೊಗ್ಗಕ್ಕೆ ಮರಳಿದ್ದರು. ಪೋಷಕರು ಊರಿಗೆ ಹಿಂತಿರುಗಿದ ಕೆಲವೇ ಗಂಟೆಗಳಲ್ಲೇ ಈ ದುರ್ಘಟನೆ ಸಂಭವಿಸಿರುವುದು ಹಲವು ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಕಾರಣವಾಗಿದೆ.

ಡಾ. ಪ್ರಜ್ಞಾ ಅವರು ಸಹಪಾಠಿ ಡಾ. ಪ್ರಿಯಾ ಪಾಟೀಲ್ ಅವರೊಂದಿಗೆ ಹಾಸ್ಟೆಲ್‌ನ ಒಂದೇ ಕೊಠಡಿಯನ್ನು ಹಂಚಿಕೊಂಡಿದ್ದರು. ಪೋಷಕರು ಬಂದಿದ್ದ ಹಿನ್ನೆಲೆ, ಆ ದಿನ ಸಹಪಾಠಿ ಪ್ರಿಯಾ ಅವರು ಬೇರೆಡೆ ತಂಗಿದ್ದರು. ರಾತ್ರಿ ವೇಳೆ ಕೊಠಡಿಯಲ್ಲಿ ಒಬ್ಬರೇ ಇದ್ದ ಪ್ರಜ್ಞಾ ಅವರು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾರೆ. ರೂಮಿಗೆ ಮರಳಿದ ಪ್ರಿಯಾ ಅವರು ಘಟನೆ ಗಮನಿಸಿ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  ಅಜಿತ್ ಪವಾರ್ ನಿಧನಕ್ಕೆ ರಾಜಕೀಯ ಗಣ್ಯರ ತೀವ್ರ ಸಂತಾಪ

ವಿಷಯ ತಿಳಿಯುತ್ತಿದ್ದಂತೆ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯಾಭ್ಯಾಸದ ಒತ್ತಡ, ಮಾನಸಿಕ ಒತ್ತಡ ಅಥವಾ ವೈಯಕ್ತಿಕ ಕಾರಣಗಳಿದೆಯೇ ಎಂಬ ಎಲ್ಲಾ ಅಂಶಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ಕನಸು ಕಂಡಿದ್ದ ಯುವ ವೈದ್ಯೆಯ ಅಕಾಲಿಕ ಸಾವು, ವೈದ್ಯಕೀಯ ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಒತ್ತಡದ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಡಿಮ್ಹಾನ್ಸ್ ಸೇರಿದಂತೆ ವೈದ್ಯಕೀಯ ವಲಯದಲ್ಲಿ ಈ ಘಟನೆ ತೀವ್ರ ವಿಷಾದ ಮೂಡಿಸಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ. 24×7 ಸಹಾಯಕ್ಕಾಗಿ ಕಿರಣ್ ಮಾನಸಿಕ ಆರೋಗ್ಯ ಸಹಾಯವಾಣಿ – 1800-599-0019 ಅನ್ನು ಸಂಪರ್ಕಿಸಬಹುದು.

Previous articleಕಿಚ್ಚೋತ್ಸವಕ್ಕೆ ಅಭಿಮಾನಿಗಳು ಸಜ್ಜು
Next articleಅಜಿತ್ ಪವಾರ್ ಪ್ರಯಾಣಿಸುತ್ತಿದ್ದ Learjet 45 ವಿಮಾನ ಪತನಕ್ಕೆ ಕಾರಣವೇನು?