ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳಿನಿಂದ ಹುಬ್ಬಳ್ಳಿಗರನ್ನು ಕಾಡಿದ್ದ ಚಿರತೆಯನ್ನು ಸೆರೆಹಿಡಿದಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬೆಳಗಿನಜಾವ ಅಜ್ಞಾತ ಸ್ಥಳಕ್ಕೆ ತೆರಳಿ ಚಿರತೆ ಬಿಟ್ಟು ಬಂದಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣ, ಗೋಕುಲ ಗ್ರಾಮ ಹಾಗೂ ಗಾಮನಗಟ್ಟಿ, ಸುತಗಟ್ಟಿ ಕಡೆ ಕಾಣಿಸಿಕೊಳ್ಳುತ್ತಾ ಆತಂಕ ಸೃಷ್ಟಿಸಿತ್ತು. ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ನಾನಾ ಕಸರತ್ತು ಮಾಡಿದ್ದರು.
ಬೆಂಗಳೂರಿನ ಬನ್ನೇರುಘಟ್ಟ, ಮೈಸೂರಿನ ಚಿರತೆ ಕಾರ್ಯಪಡೆ ಸೇರಿ ಹುಬ್ಬಳ್ಳಿ, ಧಾರವಾಡ, ಗದುಗಿನ ಅರಣ್ಯ ಇಲಾಖೆ ತಂಡಗಳೊಂದಿಗೆ ಹಗಲಿರುಳು ಕಾರ್ಯಾಚರಣೆ ನಡೆಸಿದ್ದರು.
ಥರ್ಮಲ್ ಡ್ರೋನ್ ಮೂಲಕ ಅದರ ಚಲನವಲವನ್ನು ಗಮನಿಸಿದ ಕಾರ್ಯಾಚರಣೆ ತಂಡವು, ಅದು ಸಂಚರಿಸಿದ ಸ್ಥಳ, ಸುತ್ತಮುತ್ತ ಐದು ಕಡೆ ಬೋನು(ಕೇಜ್) ಇಟ್ಟಿದ್ದರು. ಆದರೂ ಸೆರೆ ಆಗಿರಲಿಲ್ಲ.
ಸೋಮವಾರ ತುಮಕೂರಿನಿಂದ ಮತ್ತೊಂದು ಬೃಹತ್ ಬೋನನ್ನು ತರಿಸಿ ಗೋಕುಲದ ವಿಮಾನ ನಿಲ್ದಾಣ ಬಳಿ ಇಟ್ಟಿದ್ದರು. ಸೋಮವಾರ ತಡರಾತ್ರಿ ಈ ಬೋನೊಳಗೆ ಚಿರತೆ ಸಿಕ್ಕಿಬಿತ್ತು. ಬೆಳಗಿನ ಜಾವ ದಟ್ಟ ಅರಣ್ಯದೊಳಗೆ ಬಿಟ್ಟು ಬಂದಿದ್ದಾರೆ.





















