ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮಕಿ ಹಾಕಿದ ಪ್ರಕರಣದ ಆರೋಪಿ ರಾಜೀವ್‌ಗೌಡನನ್ನು ಸೋಮವಾರ ಕೇರಳದಲ್ಲಿ ಬಂಧಿಸಿರುವ ಪೊಲೀಸರು ಮಂಗಳವಾರ ಶಿಡ್ಲಘಟ್ಟದಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ಹೊರಡಿಸಿದೆ.
ಇದೇ ವೇಳೆ ರಾಜೀವ್‌ಗೌಡ ಪರ ವಕೀಲ ವಿವೇಕ್ ರೆಡ್ಡಿ ವಾದ ಮಂಡಿಸಿ ಜಾಮೀನು ಅರ್ಜಿ ಸಲ್ಲಿಸಿದರೆ, ಪೊಲೀಸರ ಪರ ವಾದವನ್ನು ಮಂಡಿಸಿದ ವಕೀಲ ಮೊಹಮ್ಮದ್ ಖ್ವಾಜಾ, ಆರೋಪಿ ಮೊಬೈಲ್ ಸೀಜ್ ಮಾಡಬೇಕಿದೆ. ಪರಾರಿಯಾಗಲು ಬಳಸಿದ್ದ ಕಾರು ವಶಕ್ಕೆ ಪಡೆಯಬೇಕಿದೆ. ಇನ್ನೂ ವಿಚಾರಣೆ ನಡೆಸಬೇಕಿದ್ದು, ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ವಾದಿಸಿದರು.
ಅಂತಿಮವಾಗಿ ರಾಜೀವ್‌ಗೌಡನ ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ, ಆತನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದೆ. ಅಲ್ಲದೆ ರಾಜೀವ್‌ಗೌಡ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದ ಆರೋಪದಡಿ ಬಂಧಿತನಾಗಿರುವ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಎಂಬುವರಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಸಹಕರಿಸಿದ ಸ್ನೇಹಿತನ ಬಂಧನ: ರಾಜೀವ್ ಗೌಡ ಬಂಧನದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಕುಶಲ್ ಚೌಕ್ಸೆ, ಪೌರಾಯುಕ್ತೆಗೆ ಧಮಿಕಿ ಹಾಕಿರುವ ಪ್ರಕರಣದಡಿ ರಾಜೀವ್‌ಗೌಡನನ್ನು ಕೇರಳದ ಮಲ್ಲೇಪುರಂ ಜಿಲ್ಲೆಯ ಹೋಟೆಲ್ ಬಳಿ ವಶಕ್ಕೆ ಪಡೆದು, ಈತನಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪದಡಿ ಉದ್ಯಮಿ ಹಾಗೂ ಆತನ ಕಾರನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಸಿನಿಮಾವೊಂದರ ಬ್ಯಾನರ್ ತೆರವು ವಿಚಾರದಲ್ಲಿ ಪೌರಾಯುಕ್ತೆ ಅಮೃತಗೌಡರಿಗೆ ಆರೋಪಿ ರಾಜೀವ್ ಗೌಡ ಧಮಕಿ ಹಾಕಿದ್ದು, ಈ ಕುರಿತು ಕಳೆದ ಜ. 14ರಂದು ಪೌರಾಯುಕ್ತೆ ಶಿಡ್ಲಘಟ್ಟ ನಗರಸಭೆಯಲ್ಲಿ ದೂರು ನೀಡಿದ್ದರು. ಅಲ್ಲದೆ ಮುಖಂಡ ಶ್ರೀನಿವಾಸಗೌಡ ಎಂಬುವರು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ರಾಜೀವ್‌ಗೌಡನ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು. ಸತತ ಪ್ರಯತ್ನದ ನಂತರ ದೊರೆತ ಮಾಹಿತಿಯಂತೆ ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ್ದು, ಈತನಿಗೆ ಸಹಕಾರ ನೀಡಿದ ಆರೋಪದಡಿ ಫರ್ನೀಚರ್ ಉದ್ಯಮಿ ಮೈಕಲ್ ಜೋಸೆಫ್ ರೇಗೋ ವಶಕ್ಕೆ ಪಡೆಯಲಾಗಿದೆ. ಇವರ ಕಾರನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.





















