ಉಡುಪಿ: ಕೋಡಿಬೆಂಗ್ರೆ ಅಳಿವೆಬಾಗಿಲು ಸಮೀಪ ಸೋಮವಾರ ಸಂಭವಿಸಿದ ಪ್ರವಾಸಿ ದೋಣಿ ದುರಂತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಮತ್ತೋರ್ವ ಯುವತಿ ಮಂಗಳವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆ ಮೂಲಕ ದುರಂತದಲ್ಲಿ ಮೃತರ ಸಂಖ್ಯೆ ಮೂರಕ್ಕೇರಿದೆ.
ಮೃತರನ್ನು ಮೈಸೂರಿನ ಉದಯಗಿರಿ ಸಮೀಪದ ಜಲಪುರಿ ನಿವಾಸಿ ಶಿವಣ್ಣ ಎಂಬವರ ಮಗಳು ದಿಶಾ (23) ಎಂದು ಗುರುತಿಸಲಾಗಿದೆ. ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (27) ಹಾಗೂ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು (25) ಮೃತಪಟ್ಟಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮರಾಜ (26) ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅವರೆಲ್ಲ ಮೈಸೂರು ಗೋಲ್ ಕ್ರಿಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದಾರೆ.





















