ಹಲಗೂರು: ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಮೂವರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಸಮೀಪದ ದೇವಿರಹಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಹಲಗೂರು ಸಮೀಪದ ದಳವಾಯಿ ಕೋಡಿಹಳ್ಳಿ ಗ್ರಾಮದ ನಾಗಮ್ಮ ರವರ ಪುತ್ರ ವರ್ಷಿತ್ (15) ಮೃತ ವಿದ್ಯಾರ್ಥಿ. ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವರ್ಷಿತ್, ಸಮರ್ಥ್ ಮತ್ತು ದಿಕ್ಷೀತ್ ಮೂವರು ಶಾಲೆ ಮುಗಿಸಿ, ಬಸ್‌ನಲ್ಲಿ ಬಂದಿಳಿದ ವಿದ್ಯಾರ್ಥಿಗಳು ಪಾದಚಾರಿ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದಾಗ ಮಳವಳ್ಳಿ ಕಡೆಯಿಂದ ಬಂದ ಕಾರೊಂದು ಹಿಂಬದಿಯಿಂದ ಮೂವರಿಗೂ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ವರ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದು, ಸಮರ್ಥ ಮತ್ತು ದಿಕ್ಷೀತ್ ಗಾಯಗೊಂಡಿದ್ದು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















