Home Advertisement
Home ನಮ್ಮ ಜಿಲ್ಲೆ ದಾವಣಗೆರೆ ರಾಷ್ಟ್ರ ಧ್ವಜಕ್ಕೆ ಅಪಮಾನ: ಖಾಸಗಿ ಶಾಲೆಗೆ ನೋಟಿಸ್ ಜಾರಿ

ರಾಷ್ಟ್ರ ಧ್ವಜಕ್ಕೆ ಅಪಮಾನ: ಖಾಸಗಿ ಶಾಲೆಗೆ ನೋಟಿಸ್ ಜಾರಿ

0
7

ದಾವಣಗೆರೆ(ಸಾಸ್ವೆಹಳ್ಳಿ): ರಾಷ್ಟ್ರದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ಶಿಕ್ಷಣ ಇಲಾಖೆ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಚಿನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಷ್ಟ್ರ ತ್ರಿವರ್ಣ ಧ್ವಜವನ್ನು ಶಾಲಾ ಕಟ್ಟಡದ ಪಿಲ್ಲರ್‌ಗೆ ಕಟ್ಟಿ ಹಾರಿಸುವ ಮೂಲಕ ಅಪಮಾನ ಮಾಡಿದ್ದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಈ ಕುರಿತು ಸಂಯುಕ್ತ ಕರ್ನಾಟಕದಲ್ಲಿ ‘ಖಾಸಗಿ ಶಾಲೆಯಲ್ಲಿ ಪಿಲ್ಲರ್‌ಗೆ ರಾಷ್ಟ್ರಧ್ವಜ ಕಟ್ಟಿ ಧ್ವಜಾರೋಹಣ!’ ಎಂಬ ಶಿರ್ಷಿಕೆಯಡಿ ಮಂಗಳವಾರ ವರದಿ ಪ್ರಕಟಿಸಲಾಗಿತ್ತು. ಪತ್ರಿಕೆಯ ವರದಿಯಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಮಂಗಳವಾರ ಶಾಲೆಗೆ ಭೇಟಿ ನೀಡಿ ಶಾಲಾ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಖಾಸಗಿ ಶಾಲೆಯೊಂದು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ವರದಿ ಪ್ರಕಟಗೊಂಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯ ಹೊನ್ನಾಳಿ ತಾಲೂಕು ಸಂಯೋಜಕ (ಇಸಿಒ) ಕೆ. ರಂಗನಾಥ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದೇ ವೇಳೆ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ವರದಿ ಪ್ರಕಟಿಸಿದ ಸಂಯುಕ್ತ ಕರ್ನಾಟಕಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಪತ್ರಿಕೆಯ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Previous articleಕಾಂಗ್ರೆಸ್‌ ಬಣ್ಣ ಬಯಲು ಮಾಡಲು ಬಿಜೆಪಿಯಿಂದ ನಿರಂತರ ಹೋರಾಟ
Next articleಮೂವರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ, ಓರ್ವ ಸಾವು