
ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಎಗ್ಗಿಲ್ಲದ ಕಮಿಷನ್ ದಂಧೆ ಹಾಗೂ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮದ್ಯ ಮಾರಾಟಗಾರರ ಸಂಘ ಬೇಸತ್ತು, ಈ ವಿಚಾರವನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ದೂರು ನೀಡಲು ಮುಂದಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ನಾಚಿಕೆಗೇಡಿನ ಸಂಗತಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಇಂದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ಆಡಳಿತ ಶೈಲಿಯ ಬಗ್ಗೆ ಕಿಡಿಕಾರಿದ್ದಾರೆ. ಮದ್ಯ ಮಾರಾಟಗಾರರು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ಬೇಸತ್ತು ರಾಷ್ಟ್ರಮಟ್ಟದ ನಾಯಕರಿಗೆ ದೂರು ನೀಡುವ ಪರಿಸ್ಥಿತಿ ನಿರ್ಮಾಣವಾಗಿರುವುದೇ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದ್ದಾರೆ.
ಇಂದಿನ ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಓದಿ: ಅಬಕಾರಿ ಹಗರಣದ ಕುರಿತು ಶೀಘ್ರವೇ ರಾಹುಲ್‌ಗೆ ದೂರು – ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರ ಎಕ್ಸ್‌ಕ್ಲೂಸಿವ್ ಸಂದರ್ಶನ
“ಪಾಪ, ಮದ್ಯ ಮಾರಾಟಗಾರರಿಗೆ ಇದರಿಂದ ಯಾವುದೇ ಪ್ರಯೋಜನ ಆಗುವ ಸಾಧ್ಯತೆ ಇಲ್ಲ. ವಸೂಲಿ ಮಾಡಲು ಆದೇಶ ಕೊಟ್ಟಿರುವವರೇ ರಾಹುಲ್ ಗಾಂಧಿ ಆಗಿರುವಾಗ, ಅವರಿಂದ ಯಾವ ರೀತಿಯ ಪರಿಹಾರವನ್ನು ನಿರೀಕ್ಷಿಸಬಹುದು?” ಎಂದು ಆರ್. ಅಶೋಕ್ ತಮ್ಮ ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದ್ದಾರೆ.
ಅಲ್ಲದೇ, ಗುತ್ತಿಗೆದಾರರು ಹಾಗೂ ಮದ್ಯ ಮಾರಾಟಗಾರರು ಎದುರಿಸುತ್ತಿರುವ ಸಮಸ್ಯೆಗಳು ಈ ಕಾಂಗ್ರೆಸ್ ಸರ್ಕಾರ ಇರುವವರೆಗೂ ಬಗೆಹರಿಯುವುದಿಲ್ಲ. “ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಈ ಸಮಸ್ಯೆಗಳು ಮುಂದುವರಿಯುತ್ತವೆ. ಇದು ಮಾತ್ರ ಗ್ಯಾರೆಂಟಿ” ಎಂದು ಅವರು ತೀಕ್ಷ್ಣವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಸೆರೆಯಾದ ಚಿರತೆ: ಒಂದೂವರೆ ತಿಂಗಳ ಭಯಕ್ಕೆ ಮುಕ್ತಿ
ಅಬಕಾರಿ ಇಲಾಖೆಯಲ್ಲಿ ಕಮಿಷನ್ ವಸೂಲಾತಿ ನಡೆಯುತ್ತಿದೆ ಎಂಬ ಆರೋಪಗಳು ಈಗಾಗಲೇ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷ ನಾಯಕನ ಈ ಹೇಳಿಕೆಗಳು ಕಾಂಗ್ರೆಸ್ ಸರ್ಕಾರದ ವಿರುದ್ಧದ ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಇಂಧನ ತುಂಬಿವೆ.





















