Home Advertisement
Home ನಮ್ಮ ಜಿಲ್ಲೆ ಧಾರವಾಡ ವೀರರಾಣಿ ಚನ್ನಮ್ಮ ಮೂರ್ತಿ ರಕ್ಷಣೆ ಭವಿಷ್ಯ ಡೋಲಾಯಮಾನ

ವೀರರಾಣಿ ಚನ್ನಮ್ಮ ಮೂರ್ತಿ ರಕ್ಷಣೆ ಭವಿಷ್ಯ ಡೋಲಾಯಮಾನ

0
10
ವೀರರಾಣಿ ಚನ್ನಮ್ಮ ಮೂರ್ತಿಯ ಸಂರಕ್ಷಣೆ ಮತ್ತು ಭವಿಷ್ಯ ಕುರಿತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಬಂದ ಲೇಖನ

ಫ್ಲೈಓವರ್ ಕಾಮಗಾರಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಅಪೋಶನ | ಇನ್ನೂ ಸರಿ ನಿರ್ಧಾರ ಕೈಗೊಳ್ಳದ ಅಧಿಕಾರಿಗಳು, ಜನಪ್ರತಿನಿಧಿಗಳು

ವರದಿ : ಮಾಲತೇಶ ಹೂಲಿಹಳ್ಳಿ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಎಂದರೆ ಮೊದಲು ನೆನಪಿಗೆ ಬರುವುದು ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿ ಹಾಗೂ ವೃತ್ತ. ಅಂತಹ ವೃತ್ತದಲ್ಲಿ ಈಗ 349 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯ ಮುಂದಿನ ಭವಿಷ್ಯವೇನು? ಎಂಬುದು ಮಾತ್ರ ಡೋಲಾಯಮಾನವಾಗಿದೆ.

ಹೌದು.. 1975ರಿಂದ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಹೋರಾಟ ನಡೆದು ಅಂತಿಮವಾಗಿ 1985-90 ರ ದಶಕದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಎಂದು ಹೆಸರಿಟ್ಟು, ಅಂತಿಮವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ ಹುಬ್ಬಳ್ಳಿಯ ಐಕಾನ್ ಆದ ವೀರ ರಾಣಿ ಚನ್ನಮ್ಮ ಮೂರ್ತಿಯನ್ನು ಮೇಲಕ್ಕೆ ಎತ್ತರಿಸಬೇಕೆ? ಯಥಾಸ್ಥಿತಿ ಇರಬೇಕೆ ಅಥವಾ ಸ್ಥಳಾಂತರಿಸಬೇಕೆ ಎಂಬ ಬಗ್ಗೆ ಈವರೆಗೂ ಚರ್ಚೆ ನಡೆದಿಲ್ಲವಂತೆ !

ಇದನ್ನೂ ಓದಿ:  ಸಂಘರ್ಷ ರಹಿತ ರಾಜ್ಯಪಾಲರ ನಡೆ: ಗಣರಾಜ್ಯ ಭಾಷಣ ನಿರಾಳ

ಇದರಲ್ಲಿ ಅಧಿಕಾರಿಗಳು ಮೌನಕ್ಕೆ ಶರಣಾದರೇ, ಜನಪ್ರತಿನಿಧಿಗಳು ಬೃಹತ ಫ್ಲೈಓವರ್ ನಿರ್ಮಾಣದ ನಂತರ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಹೇಗೆ ಸಂರಕ್ಷಣೆ ಮಾಡಬೇಕು? ಯಾವ ರೀತಿ ಸುಂದರಗೊಳಿಸಬೇಕು? ಮೂರ್ತಿಯ ಘನತೆ, ಗೌರವ ಕಾಪಾಡುವ ನಿಟ್ಟಿನಲ್ಲಿ ಏನೇನು ಕ್ರಮಕೈಗೊಳ್ಳಬೇಕು ಎನ್ನುವ ಕುರಿತು ಗಮನ ಹರಿಸಿಲ್ಲ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ, ಹುಬ್ಬಳ್ಳಿಯ ಪ್ರಮುಖ ಐಕಾನ್ ಆಗಿರುವ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯ ಮುಂದಿನ ಭವಿಷ್ಯವೇನು? ಎಂಬ ಆತಂಕ ಸಾರ್ವಜನಕರಲ್ಲಿ, ರಾಣಿ ಚನ್ನಮ್ಮನ ಅಪ್ಪಟ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇದನ್ನೂ ಓದಿ:  ಮಾನವ–ಆನೆ ಸಂಘರ್ಷ ತಗ್ಗಿಸಲು ಮಹತ್ವದ ಹೆಜ್ಜೆ

ಮೂರ್ತಿ ಘನತೆ, ಗೌರವ ಕಾಪಾಡುವುದೇ ಸವಾಲು: ಚನ್ನಮ್ಮ ವೃತ್ತದಷ್ಟು ವಿಶಾಲವಾದ ವೃತ್ತ ನಗರದಲ್ಲಿ ಮತ್ತೊಂದು ಇಲ್ಲ. 15 ಅಡಿ ಎತ್ತರದ ಅಶ್ವಾರೂಢ ಚನ್ನಮ್ಮ ಪ್ರತಿಮೆಯನ್ನು ಬೇರೆಡೆ ಸ್ಥಳಾಂತರಿಸುವುದು ಅವೈಜ್ಞಾನಿಕ. ವೀರ ರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಯ ಎತ್ತರಕ್ಕಿಂತ ಹೆಚ್ಚುವರಿ ಐದಾರು ಅಡಿ ಎತ್ತರವಷ್ಟೇ ಸೇತುವೆ ನಿರ್ಮಾಣ ಆಗುವುದರಿಂದ, ಈಗಿರುವ ಜಾಗದಲ್ಲಿ ಹಾಗೆ ಮೂರ್ತಿ ಇಟ್ಟರೆ ಅದರ ಅಸ್ತಿತ್ವ ಕಳೆಗುಂದಲಿದೆ.

ಮೂರ್ತಿಯನ್ನು ಎತ್ತರಕ್ಕೆ ಏರಿಸಿದರೆ, ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ತೊಡಕಾಗುತ್ತದೆ. ಇದಕ್ಕೆ ಸುಲಭ ಪರಿಹಾರ ಸೂತ್ರ ಲಭಿಸದ ಕಾರಣ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಟಸ್ಥರಾಗಿದ್ದಾರೆ. ಹುಬ್ಬಳ್ಳಿಯನ್ನು ಪ್ರತಿನಿಧಿಸುವ, ಹೆಮ್ಮೆಯ ಹೆಗ್ಗುರುತಾದ ಚನ್ನಮ್ಮ ಪ್ರತಿಮೆಯನ್ನು ಕಾಮಗಾರಿ ನೆಪದಲ್ಲಿ ನಿರ್ಲಕ್ಷಿಸಿದ್ದು ಅಕ್ಷಮ್ಯ. ಅಲ್ಲದೇ ಸಂರಕ್ಷಣೆಗೆ ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡದಿರುವುದು ಅಸಡ್ಡೆಯೇ ಸರಿ ಎಂದು ಜನರು ಆಡಿಕೊಳ್ಳಲಾರಂಬಿಸಿದ್ದಾರೆ.

ಇದನ್ನೂ ಓದಿ:  ಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ

ಈಗಾಗಲೇ ಮೂರ್ತಿ ಸಂಪೂರ್ಣ ದೂಳುಮಯವಾಗಿದ್ದು, ನೈಜ್ಯತೆ ಕಳೆದುಕೊಂಡಿದೆ. ಅದರ ಸುತ್ತ ಬೃಹತ್ ಫಿಲ್ಲರ್‌ಗಳು ನಿರ್ಮಾಣವಾಗಿ, ಪ್ರತಿಮೆಯೇ ಕಾಣದಂತಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಚನ್ನಮ್ಮ ಪ್ರತಿಮೆ ಮರೆಯಾಗಿ, ಎಲ್ಲಿದೆ ಎಂದು ಹುಡುಕುವ ಸ್ಥಿತಿ ನಿರ್ಮಾಣವಾಗಲಿದೆ.

ಮೇಲ್ಸೇತುವೆ ಮುಕ್ತಾಯ ಹಂತ ತಲುಪಿದರೂ ನಿರ್ಧಾರವಿಲ್ಲ: ಮೇಲ್ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದರೂ, ಚನ್ನಮ್ಮ ಪ್ರತಿಮೆಯ ಬಗ್ಗೆ ಯಾವ ನಿರ್ಧಾರವೂ ಆಗಿಲ್ಲ. ಯೋಜನೆಯಲ್ಲೂ ಮೂರ್ತಿ ಕುರಿತು ಯಾವ ಮಾಹಿತಿಯೂ ಇಲ್ಲ. ಈಗಿರುವ ಯಥಾಸ್ಥಿತಿಯಲ್ಲಿಯೇ ಪ್ರತಿಮೆಯಿಟ್ಟರೆ, ಮೇಲ್ಸೇತುವೆ ಪೂರ್ಣಗೊಂಡ ನಂತರ ಇಕ್ಕಟ್ಟಾದ ಸ್ಥಳದಲ್ಲಿ ಅದರ ಇರುವಿಕೆಯೇ ಇಲ್ಲದಂತಾಗುತ್ತದೆ. ಮೇಲಕ್ಕೆತ್ತರಿಸಿದರೆ ಮೇಲ್ಸೇತುವೆ ಮೇಲೆ ಸಂಚರಿಸುವವರಿಗಷ್ಟೇ ಅದು ಕಾಣಲಿದೆ. ಯೋಜನೆ ವಿನ್ಯಾಸದ ವೇಳೆಯೇ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕೊಟ್ಟ ಮಾತಿನಂತೆ ಮೂರ್ತಿ ಗೌರವ ಕಾಪಾಡಲಿ: ಫ್ಲೈಓವರ್ ಕಾಮಗಾರಿ ಮುನ್ನ ನಡೆದ ಸಭೆಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆ ಯಾವ ರೀತಿ ನಿರ್ಮಾಣ ಮಾಡಬೇಕು ಎಂಬುದರ ಕುರಿತು ಸಮಾಜದ ಮುಖಂಡರಿಗೆ ಕೊಟ್ಟ ಮಾತಿನಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ರಾಣಿ ಚನ್ನಮ್ಮ ಮೂರ್ತಿ ಹಾಗೂ ವೃತ್ತ ಹುಬ್ಬಳ್ಳಿಗೆ ಗೌರವದ ಪ್ರತೀಕ. ಅಂದು ನಡೆದ ಸಭೆಯಲ್ಲಿ ಅಧಿಕಾರಿಗಳು, ಸಮಾಜದ ಮುಖಂಡರಾದ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್ ಅವರಿಗೆ ಅದೇ ಸ್ಥಳದಲ್ಲಿ ಹೊಸ ಮಾದರಿಯ ಪ್ರತಿಮೆ ಪ್ರತಿಷ್ಠಾಪಿಸುವ ಭರವಸೆ ನೀಡಿದ್ದರು, ಅದರಂತೆ ಕಾಮಗಾರಿ ಮುಕ್ತಾಯದ ನಂತರ ಅದೇ ಜಾಗದಲ್ಲಿ ಫ್ಲೈಓವರ್‌ಕ್ಕಿಂತ ಎತ್ತರಕ್ಕೆ ಮೂರ್ತಿ ಪ್ರತಿಷ್ಠಾಪಿಸಬೇಕು. ಕೆಳಗಡೆ ಜಾಗದಲ್ಲಿ ಕೂಡಲಸಂಗಮ ಮಾದರಿಯಲ್ಲಿ ಸಭಾಭವನ ಮಾಡಬೇಕು. ಮೆಟ್ಟಿಲು ನಿರ್ಮಾಣ ಮಾಡಿ ಮೂರ್ತಿಗೆ ಗೌರವ ಸೂಚಿಸಲು ಅನುಕೂಲ ಮಾಡಿಕೊಡಬೇಕು.

ರಾಜಶೇಖರ್ ಮೆಣಸಿನಕಾಯಿ, ಕಾರ್ಯಾಧ್ಯಕ್ಷರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ.

ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಈಗ ಯಾವುದೇ ನಿರ್ಧಾರ ಕೈಗೊಂಡರು ಅದು ಅಂತಿಮವಾಗುವುದಿಲ್ಲ. ಹೀಗಾಗಿ ಕಾಮಗಾರಿ ಪೂರ್ಣ ಚಿತ್ರಣದ ನಂತರ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಯನ್ನು ಆ ಸ್ಥಳದಲ್ಲಿ ಯಾವ ರೀತಿ ನಿರ್ಮಾಣ ಮಾಡಬೇಕು. ಯಾವ ರೀತಿ ಅಲಂಕಾರ ಮಾಡಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳಲಾಗುವುದು

-ಮಹೇಶ ಟೆಂಗಿನಕಾಯಿ, ಶಾಸಕರು.

Previous articleಮದರಿ ಗ್ರಾಮದ ನದಿ ತೀರದ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷ