ದೆಹಲಿ: ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಪರಮಾಣು ಶಕ್ತಿ, ಅರೆವಾಹಕಗಳು, ಮೊಬಿಲಿಟಿ, ಗ್ರೀನ್ ಹೈಡ್ರೋಜನ್, ಜೈವಿಕ ತಂತ್ರಜ್ಞಾನ ಯಾವುದೇ ವಲಯದಲ್ಲಿ ಒಂದಲ್ಲಾ ಒಂದು ಭಾರತೀಯ ನವೋದ್ಯಮಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ಹಬ್ ಆಗಿ ಹೊರಹೊಮ್ಮುತ್ತಿದೆ. ಪ್ರಪಂಚವೇ ಭಾರತದ ಮೇಲೆ ದೃಷ್ಟಿ ನೆಟ್ಟಿದೆ. ಇಂತಹ ಸಮಯದಲ್ಲಿ, ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿಯಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೈಗಾರಿಕೆ ಮತ್ತು ನವೋದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಯುವಕರು ಗುಣಮಟ್ಟಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದರು. ‘ಆಗತ್ತೆ, ಪರವಾಗಿಲ್ಲ, ನಡೆಯುತ್ತದೆ’ ಎಂಬ ಯುಗ ಕಳೆಯಿತು. ಈ ವರ್ಷ ನಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಗುಣಮಟ್ಟಕ್ಕೆ ಆದ್ಯತೆ ನೀಡೋಣ. ಗುಣಮಟ್ಟ, ಗುಣಮಟ್ಟ ಮತ್ತು ಕೇವಲ ಗುಣಮಟ್ಟ, ನಿನ್ನೆಗಿಂತ ಇಂದು ಉತ್ತಮ ಗುಣಮಟ್ಟ ಎಂಬುದು ನಮ್ಮ ಏಕೈಕ ಮಂತ್ರವಾಗಲಿ ಎಂದರು.
ನಾವು ಉತ್ಪಾದಿಸುವ ಯಾವುದೇ ವಸ್ತುವಿನ ಗುಣಮಟ್ಟವನ್ನು ಸುಧಾರಿಸಲು ಸಂಕಲ್ಪಗೈಯ್ಯೋಣ. ಅದು ನಮ್ಮ ಜವಳಿ, ತಂತ್ರಜ್ಞಾನ ಅಥವಾ ಎಲೆಕ್ಟ್ರಾನಿಕ್ಸ್. ಅಥವಾ ಕೇವಲ ಪ್ಯಾಕೇಜಿಂಗೇ ಆಗಿರಲಿ, ಭಾರತೀಯ ಉತ್ಪನ್ನವೆಂದರೆ ಉತ್ಕೃಷ್ಟ ಗುಣಮಟ್ಟ ಎನ್ನುವಂತಾಗಲಿ. ಬನ್ನಿ, ಶ್ರೇಷ್ಠತೆಯನ್ನು ನಮ್ಮ ಮಾನದಂಡವನ್ನಾಗಿ ಮಾಡಿಕೊಳ್ಳೋಣ. ಗುಣಮಟ್ಟ ತಗ್ಗುವುದಿಲ್ಲ ಮತ್ತು ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂಕಲ್ಪಗೈಯ್ಯೋಣ. ನಾನು ಕೆಂಪು ಕೋಟೆಯಿಂದಲೇ “Zero defect – Zero effect” ಎಂಬ ಮಂತ್ರವನ್ನು ಘೋಷಿಸಿದ್ದೆ. ಹೀಗೆ ಮಾಡುವುದರಿಂದ ಮಾತ್ರ ನಾವು ಅಭಿವೃದ್ಧಿ ಹೊಂದಿದ ಭಾರತದತ್ತ ಪಯಣಕ್ಕೆ ವೇಗ ನೀಡಲು ಸಾಧ್ಯವಾಗುತ್ತದೆ ಎಂದರು.
ಮತದಾರರು ಪ್ರಜಾಪ್ರಭುತ್ವದ ಆತ್ಮವಿದ್ದಂತೆ: ಜನವರಿ 25 ಇಂದಿನ ದಿನ ರಾಷ್ಟ್ರೀಯ ಮತದಾರರ ದಿನ. ಮತದಾರರು ಪ್ರಜಾಪ್ರಭುತ್ವದ ಆತ್ಮವಿದ್ದಂತೆ. ಸಾಮಾನ್ಯವಾಗಿ, ಯಾರೇ ಆಗಲಿ 18 ವರ್ಷ ತುಂಬಿದಾಗ ಅವರು ಮತದಾರರಾಗುತ್ತಾರೆ, ಅದನ್ನು ಜೀವನದ ಒಂದು ಸಾಮಾನ್ಯ ಸಂಗತಿ ಎಂದೇ ಪರಿಗಣಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ, ಈ ಸಂದರ್ಭವು ಯಾವುದೇ ಭಾರತೀಯನ ಜೀವನದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ. ಆದ್ದರಿಂದ, ನಾವು ದೇಶದಲ್ಲಿ ಮತದಾರರಾಗುವ ಸಂದರ್ಭವನ್ನು ಆಚರಿಸುವುದು ಬಹಳ ಮುಖ್ಯ. ಹುಟ್ಟುಹಬ್ಬವನ್ನು ಆಸೆಯಿಂದ ನಾವು ಆಚರಿಸುವಂತೆಯೇ, ಸಂಭ್ರಮಿಸಬೇಕು ಎಂದರು.





















