ಬೆಳಗಾವಿ: 400 ಕೋಟಿ ದರೋಡೆ ಆರೋಪವು ಪ್ರಸ್ತುತ ದೂರುದಾರರ ಹೇಳಿಕೆಯ ಮೇಲೆ ಮಾತ್ರ ಆಧಾರಿತವಾಗಿದೆ ಎಂದು ಬೆಳಗಾವಿ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಸ್ಪಷ್ಟಪಡಿಸಿದರು.
ಈ ಬಗ್ಗೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಸಿಕ್‌ನಲ್ಲಿ ದೂರುದಾರರನ್ನು ಭೇಟಿ ಮಾಡಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದರು. ಆದರೆ ಬಂಧಿತ ನಾಲ್ವರನ್ನು ವಿಚಾರಣೆ ಮಾಡಲು ಇನ್ನೂ ಮಹಾರಾಷ್ಟ್ರ ಪೊಲೀಸರು ಬೆಳಗಾವಿ ತಂಡಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿಸಿದರು.
“ಈ ಘಟನೆಗೆ ಸಾಕ್ಷಿಯಾದವರು ಅಥವಾ ಇತರೇ ಆಗಲಿ ಯಾರೂ ಇಲ್ಲ. ಗುರುತಿಸಲ್ಪಟ್ಟ ಯಾವುದೇ ವ್ಯಕ್ತಿಯೂ ಇಲ್ಲ. ಹಲವು ಪೊಲೀಸ್ ಠಾಣೆಗಳು ಹಾಗೂ ಚೆಕ್‌ಪೋಸ್ಟ್‌ಗಳ ಮೂಲಕ ಇಂತಹ ಕಂಟೈನರ್‌ಗಳು ಸಾಗಿದವು ಎಂಬುದನ್ನು ದೃಢಪಡಿಸುವ ಸ್ವತಂತ್ರ ಸಾಕ್ಷ್ಯವೂ ಇದುವರೆಗೆ ಲಭ್ಯವಾಗಿಲ್ಲ. ಹೀಗಾಗಿ ದೂರುದಾರರ ಹೇಳಿಕೆಯ ನೈಜತೆಯನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ,” ಎಂದರು.
ಇದನ್ನೂ ಓದಿ: 400 ಕೋಟಿ ದರೋಡೆ ಪ್ರಕರಣ: ನಾಸಿಕ್‌ಗೆ ಬೆಳಗಾವಿ ಪೊಲೀಸ್ ತಂಡ
ಇನ್ನು ಬೆಳಗಾವಿ ಪೊಲೀಸರು ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ. ಔಪಚಾರಿಕ ತನಿಖೆ ಆರಂಭಿಸಲು ಎಫ್‌ಐಆರ್ ನೋಂದಣಿ ಕಡ್ಡಾಯ. ಘಟನೆ ನಡೆದಿದೆ ಎಂದು ಹೇಳಲಾಗಿರುವ ಸ್ಥಳವು ಕರ್ನಾಟಕ ಗೋವಾ ಮಹಾರಾಷ್ಟ್ರಗಳ ಗಡಿಪ್ರದೇಶದಲ್ಲಿದೆ ಎಂದೂ ಅವರು ಹೇಳಿದರು.
ಮಾಧ್ಯಮಗಳಲ್ಲಿ ಬಂದ ವರದಿಗಳು ಮತ್ತು ನಾಸಿಕ್ ಪೊಲೀಸರ ಮನವಿಯ ಹಿನ್ನೆಲೆಯಲ್ಲಿ ನಾವು ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದೇವೆ. ಈವರೆಗೆ ಮಹಾರಾಷ್ಟ್ರ ಪೊಲೀಸರಿಂದ ಯಾವುದೇ ವಿಶ್ವಾಸಾರ್ಹ ಮಾಹಿತಿ ನಮಗೆ ಲಭ್ಯವಾಗಿಲ್ಲ ಎಂದು ಎಸ್‌ಪಿ ರಾಮರಾಜನ್ ಹೇಳಿದರು.






















