ಉತ್ತರ ಕನ್ನಡ(ದಾಂಡೇಲಿ): ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಉಳವಿಯ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ಷಟ್‌ಸ್ಥಳ ಧ್ವಜಾರೋಹಣದೊಂದಿಗೆ ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಸಂಜಯ ಕಿತ್ತೂರು ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಜಾತ್ರೆಯ ಮೊದಲ ದಿನವಾದ ಇಂದು ಸಂಜೆ ವಿಶೇಷ ಸೀಮಾ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಫೆಬ್ರುವರಿ 3ರಂದು ಮಾಘ ಮಾಸದ ಶುಭ ಘಳಿಗೆಯಲ್ಲಿ ರಥೋತ್ಸವ ನಡೆಯಲಿದೆ.
ಇದೇ ಸಂಧರ್ಭದಲ್ಲಿ ಯಾತ್ರಿ ನಿವಾಸದ 3ನೇ ಮಹಡಿಯ 35 ಕೊಠಡಿಗಳ ಉದ್ಟಾಟನೆಯನ್ನು ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರು ನೆರವೇರಿಸಿದರು. ಟ್ರಸ್ಟಿನ ಸದಸ್ಯರಾದ ಗಂಗಾಧರ ಕಿತ್ತೂರು, ವಿರೇಶ ಕಂಬಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೊಕಾಶಿ, ಮುಖ್ಯ ಅರ್ಚಕರಾದ ಕಲ್ಮಠ ಶಾಸ್ತ್ರೀ, ಭಕ್ತರಾದ ಶಿವಾನಂದ ಕೊನ್ನುರು, ಹುಬ್ಬಳ್ಳಿಯ ಮಾಜಿ ಮೇಯರ್ ವಿಜಯಾನಂದ ಹೊಸ ಕೋಟಿ, ಬೈಲಹೊಂಗಲದ ಶಿವಾನಂದ ಬೆಳಗಾವಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕುಡುಕರ ರಾಜ್ಯ ಮಾಡಲು ಹೊರಟಿದೆ
ಈಗಾಗಲೇ ಜಾತ್ರೆಗಾಗಿ ಉತ್ತರ ಕರ್ನಾಟಕದ ವಿವಿಧಡೆಗಳಿಂದ ಚಕ್ಕಡಿಗಳು ಬರಲಾರಂಭಿಸಿದ್ದು, ದಾಂಡೇಲಿಯ ಮೃತ್ಯುಂಜಯ ಮಠದಲ್ಲಿ ಭಕ್ತಾಧಿಗಳು ವಿಶ್ರಾಂತಿ ಪಡೆದು ಮುಂದಕ್ಕೆ ಪಯಣಿಸುತ್ತಿದ್ದಾರೆ. ದಿನ ಕಳೆದಂತೆ ಚಕ್ಕಡಿಗಳಲ್ಲಿ ಕುಟುಂಬ ಸಮೇತ ಜಾತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಲಿದೆ. ಭಕ್ತರ ಅನುಕೂಲಕ್ಕಾಗಿ ಮೃತ್ಯುಂಜಯ ಮಠದಲ್ಲಿ ದಾಸೋಹದ ಸಿದ್ಧತೆ ನಡೆಯುತ್ತಿದೆ. ಚಕ್ಕಡಿ ನಿಲ್ಲಿಸಲು, ಎತ್ತುಗಳ ವಿಶ್ರಾಂತಿಗೆ, ಅವುಗಳ ದೇಖರಿಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ.









