Home Advertisement
Home ನಮ್ಮ ಜಿಲ್ಲೆ ಧಾರವಾಡ ಕಾಂಗ್ರೆಸ್ ಸರ್ಕಾರ ಕುಡುಕರ ರಾಜ್ಯ ಮಾಡಲು ಹೊರಟಿದೆ

ಕಾಂಗ್ರೆಸ್ ಸರ್ಕಾರ ಕುಡುಕರ ರಾಜ್ಯ ಮಾಡಲು ಹೊರಟಿದೆ

0
4

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ ನಡೆಯುವುದರಿಂದ ಲಕ್ಷಾಂತರ ಜನ ಬರ್ತಾರೆ. ಲಿಕ್ಕರ್ ಸ್ಟಾಕ್ ಮಾಡಿಟ್ಟುಕೊಳ್ಳಿ ಎಂದು ಅಬಕಾರಿ ಅಧಿಕಾರಿಗಳೇ ಆದೇಶ ಮಾಡ್ತಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಕುಡುಕರ ರಾಜ್ಯ ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆರ್ಥಿಕ ದಿವಾಳಿಯಾಗಿಲ್ಲ. ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಅವರ ಮಾತು ನಂಬಬೇಡಿ. ಆರ್ಥಿಕ ದಿವಾಳಿ ಆಗಿದ್ದರೆ ಅಭಿವೃದ್ಧಿ ಕೆಲಸಕ್ಕೆ, ಗ್ಯಾರಂಟಿ ಯೋಜನೆಗೆ ಹಣ ಎಲ್ಲಿಂದ ಬರ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ, ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ದೊಡ್ಡದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಅವರ ಖಜಾನೆ ಖಾಲಿ ಆಗಿದೆ. ಅಬಕಾರಿ ಇಲಾಖೆ ಮೂಲಕ ಹಣ ಆದಾಯ ಸಂಗ್ರಹಕ್ಕೆ ಜೋತು ಬಿದ್ದಿದ್ದಾರೆ. ಈ ರಾಜ್ಯದಲ್ಲಿ ಪ್ರತಿ 500 ಮೀಟರ್‌ಗೊಂದು ಮೆಡಿಕಲ್ ಶಾಪ್ ಇದೆಯೊ ಇಲ್ಲವೊ. ಆದರೆ ವೈನ್ ಶಾಪ್ ಮಾತ್ರ ಸಿಗುತ್ತವೆ. ಆ ಮಟ್ಟಕ್ಕೆ ರಾಜ್ಯ ಹಾಳು ಮಾಡಲು ಹೊರಟಿದ್ದಾರೆ. ಕುಡುಕರ ರಾಜ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ದೇಶದಲ್ಲಿ 90 ಬಾರಿ ರಾಷ್ಟ್ರಪತಿ ಆಡಳಿತ ಹೇರಿದ ಕೀರ್ತಿ ಕಾಂಗ್ರೆಸ್‌ನವರದು

ಬಿಜೆಪಿ ಸರ್ಕಾರ ಇದ್ದಾಗಲೇ ಮನೆ ಮಂಜೂರು, ಭೂಮಿ ಖರೀದಿ: ಈ ಕಾಂಗ್ರೆಸ್ ಸರ್ಕಾರ ಕಡೆದು ಕಟ್ಟೆ ಹಾಕಿ ಮನೆಗಳನ್ನು ಕೊಡುತ್ತಿಲ್ಲ. ಶನಿವಾರ 42 ಸಾವಿರ ಮನೆ ಹಂಚಿಕೆ ಮಾಡಿದ್ದರಲ್ಲಿ ಪ್ರತಿ ಮನೆಗೆ ಒಂದು ಲಕ್ಷ ಇಪ್ಪತ್ತೈದು ಸಾವಿರ ಕೇಂದ್ರ ಸರ್ಕಾರ ಅನುದಾನ ದೊರಕಿಸಿದೆ. ಅಲ್ಲದೇ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಬಿಜೆಪಿಯವರೇ ಪಾಲಿಕೆ ಮೇಯರ್ ಇದ್ದಾಗ ಹುಬ್ಬಳ್ಳಿಯಲ್ಲಿ 16 ಎಕರೆ ಜಮೀನು ಗುರುತಿಸಿ ಜಾಗ ಖರೀದಿಸಿದ್ದು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಮನೆ ಮಂಜೂರು ಮಾಡಿದ್ದರು. ಈಗ ಕಾಂಗ್ರೆಸ್‌ನವರು ಎಲ್ಲವನ್ನೂ ತಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಈ ಭಾಗದ ಸಂಸದರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಆಹ್ವಾನಿಸಿಲ್ಲ. ಪ್ರೊಟೊಕಾಲ್ ಅನುಸರಿಸಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.‌

ಮಹದಾಯಿ ಯೋಜನೆ ಸೇರಿದಂತೆ ರಾಜ್ಯದ ಜಲ ಯೋಜನೆಗಳ ಜಾರಿಗೆ ಬಿಜೆಪಿ ಬದ್ಧವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.

Previous articleರಾಜ್ಯಪಾಲರ ನಡೆ ಅಸಂವಿಧಾನಿಕ: ಸಚಿವ ಪ್ರಿಯಾಂಕ್