ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿ, ಅಪ್ಪರ್ ಭದ್ರಾ ಯೋಜನೆಗೆ ಘೋಷಿಸಿದ ಅನುದಾನವನ್ನು ಬಿಡುಗಡೆ ಮಾಡಲಿ
ಹುಬ್ಬಳ್ಳಿ: “ಏನೂ ಅಭಿವೃದ್ಧಿ ಕೆಲಸ ಮಾಡದೇ, ಜಾತಿ–ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಮುಂದಿನ ಯಾವ ಚುನಾವಣೆಯಲ್ಲೂ ಮತ ಹಾಕಬೇಡಿ. ಬಿಜೆಪಿಗೆ ಮತ ಹಾಕಿದರೆ ಜನರು ಗುಲಾಮಗಿರಿಗೆ ಬಲಿಯಾಗುತ್ತಾರೆ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಎಚ್ಚರಿಕೆ ನೀಡಿದರು.
ಇಲ್ಲಿನ ಮಂಟೂರ ರಸ್ತೆಯಲ್ಲಿ ಪಿಎಂಎವೈ, ವಸತಿ ಇಲಾಖೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾದ 42 ಸಾವಿರ ಮನೆಗಳ ಹಸ್ತಾಂತರ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿಯವರು ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ಏನೂ ಕೊಟ್ಟಿಲ್ಲ.
ಇದನ್ನೂ ಓದಿ: ಕಟೌಟ್ ಕುಸಿತ ಪ್ರಕರಣ: ಗಾಯಾಳು ಯೋಗಕ್ಷೇಮ ವಿಚಾರಿಸಿದ ಸಚಿವ ಜಮೀರ್
ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅವರು ನೀಡಿದ ಭರವಸೆಗಳನ್ನೇ ಈಡೇರಿಸಿಲ್ಲ. ಬದಲಾಗಿ ಕಾಂಗ್ರೆಸ್ ಸರ್ಕಾರ ಸುದೀರ್ಘ ಅವಧಿಯಲ್ಲಿ ಜನಪರವಾಗಿ ಜಾರಿಗೆ ತಂದ ಯೋಜನೆಗಳನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಕಾಂಗ್ರೆಸೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಅಭಿವೃದ್ಧಿಪರ ಆಡಳಿತಕ್ಕೆ ರಾಜ್ಯಪಾಲರ ಮೂಲಕ ಅಡ್ಡಿಪಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ
ಮನರೇಗಾ ವಿರುದ್ಧ ಬಿಜೆಪಿ ನೀತಿ: ಮನರೇಗಾ ಯೋಜನೆಯನ್ನು ತೆಗೆದು ಹಾಕಿ “ಜಿ ರಾಮ್–ಜಿ” ಯೋಜನೆಯನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದ ಖರ್ಗೆ, ಈ ಯೋಜನೆಯಿಂದ ಗ್ರಾಮೀಣ ಜನರಿಗೆ ಕೆಲಸ ಸಿಗುವುದೇ ಮರೀಚಿಕೆಯಾಗಲಿದೆ ಎಂದರು.
125 ದಿನ ಕೆಲಸ ಕೊಡುತ್ತೇವೆ ಎಂದು ಹೇಳಿ, ಅದರ ವೆಚ್ಚದ ಶೇ.40ರಷ್ಟು ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಕೇಂದ್ರ ಹೇಳುತ್ತಿದೆ. ಇದರಿಂದ ಜನರಿಗೆ ಯಾವ ಲಾಭವೂ ಇಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಾರ್ ದಹನ ಪ್ರಕರಣ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ
“ನಾವು ಮನರೇಗಾ ಯೋಜನೆಯನ್ನು ರದ್ದಾಗಲು ಬಿಡುವುದಿಲ್ಲ. ರೈತ ವಿರೋಧಿ ಮೂರು ಕಾಯ್ದೆಗಳ ವಿರುದ್ಧ ನಡೆದ ಹೋರಾಟದಂತೆ, ದೇಶವ್ಯಾಪಿ ಬೃಹತ್ ಹೋರಾಟ ಮಾಡುತ್ತೇವೆ” ಎಂದು ಖರ್ಗೆ ಎಚ್ಚರಿಕೆ ನೀಡಿದರು.
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ: ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ದಿವಾಳಿಯಾಗಿಲ್ಲ. ಬಿಜೆಪಿಯವರ ಸುಳ್ಳು ಪ್ರಚಾರವನ್ನು ಜನರು ನಂಬಬಾರದು” ಎಂದು ಹೇಳಿದರು.
ಇದನ್ನೂ ಓದಿ: “ಲ್ಯಾಂಡ್ ಲಾರ್ಡ್” ದರ್ಶನಕ್ಕೆ ಸಿದ್ದರಾಮಯ್ಯ ಸಿದ್ದ
ರಾಜ್ಯ ಸರ್ಕಾರ ದಿವಾಳಿಯಾಗಿದ್ದರೆ ಲಕ್ಷಾಂತರ ಮನೆ ನಿರ್ಮಾಣ, ಅಭಿವೃದ್ಧಿ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದ ಅವರು, “ಒಂದು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ 16 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದೇವೆ” ಎಂದು ವಿವರಿಸಿದರು.
ಬಿಜೆಪಿಯವರಿಗೆ ಬಡವರ ಕಷ್ಟ, ರೈತರ ನೋವು ಅರ್ಥವಾಗುವುದಿಲ್ಲ. ಅವರು ಸುಳ್ಳು ಹೇಳುವುದನ್ನೇ ರಾಜಕಾರಣ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿ, ಅಪ್ಪರ್ ಭದ್ರಾ ಯೋಜನೆಗೆ ಘೋಷಿಸಿದ ಅನುದಾನವನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಹಾಗೂ ರಮಾನಾಥ ರೈ ವಿರುದ್ಧ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ವಾಗ್ದಾಳಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಹದಾಯಿ ಯೋಜನೆ ಜಾರಿಗೆ ಒಪ್ಪಿಗೆ ತಂದು ತಮ್ಮ ಬದ್ಧತೆ ತೋರಿಸಲಿ ಎಂದು ಸಿಎಂ ಹೇಳಿದರು.
ಉಪಸ್ಥಿತರು: ಈ ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಚಿವರಾದ ಎಚ್.ಕೆ. ಪಾಟೀಲ, ಸತೀಶ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಎಂ.ಸಿ. ಸುಧಾಕರ್, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಹಾಗೂ ಹಲವಾರು ಶಾಸಕರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.






















