ರಾಯಚೂರು: ಹಳೆ ವೈಷಮ್ಯ ಹಿನ್ನೆಲೆ ಹಾಗೂ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಯುವಕನನ್ನು ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ ಘಟನೆ ರಾಯಚೂರಿನ ಜಹೀರಾಬಾದ್ ಪ್ರದೇಶದ ಮಾವಿನ ಕೆರೆ ಬಳಿ ಶನಿವಾರ ಬೆಳ್ಳಂಬೆಳಿಗ್ಗೆ ನಡೆದಿದೆ.
ಕೊಲೆಯಾದ ಯುವಕನನ್ನು ಆಟೋ ಚಾಲಕ ವಿಶಾಲ್ (22) ಎಂದು ಗುರುತಿಸಲಾಗಿದೆ. ಸ್ನೇಹಿತನನ್ನು ನಿಂದಿಸಿದ್ದ ವಿಷಯವನ್ನು ಪ್ರಶ್ನಿಸಲು ವಿಶಾಲ್ ಆರೋಪಿಗಳ ಬಳಿ ತೆರಳಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದು, ನಂತರ ಜಗಳ ತೀವ್ರಗೊಂಡು ಆರೋಪಿಗಳು ಚಾಕುವಿನಿಂದ ವಿಶಾಲ್‌ನ ಮೇಲೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾರ್ ದಹನ ಪ್ರಕರಣ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ
ಘಟನೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ನಡೆದಿದ್ದು, ಗಂಭೀರ ಗಾಯಗಳಿಂದ ವಿಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಾದ ರಾಜು ಮತ್ತು ಬಸವರಾಜ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹತ್ಯೆಗೆ ಬಳಸಿದ ಚಾಕುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಟೌಟ್ ಕುಸಿತ: ಮೂವರು ಗಂಭೀರ ಗಾಯ
ಈ ಪ್ರಕರಣದ ತನಿಖೆಯನ್ನು ಸದರ ಬಜಾರ್ ಪೊಲೀಸ್ ಠಾಣೆ ಪೊಲೀಸರು ಕೈಗೊಂಡಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣವಾದ ಹಳೆ ವೈಷಮ್ಯ ಹಾಗೂ ಇತರ ಹಿನ್ನೆಲೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಮಾಹಿತಿ ನೀಡಿದ್ದಾರೆ.









