ದಾಂಡೇಲಿ (ಉತ್ತರ ಕನ್ನಡ): ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರೆ ಜ.25ರಂದು ಷಟಸ್ಥಲ ಧ್ವಜಾರೋಹಣದೊಂದಿಗೆ ಅಧಿಕೃತವಾಗಿ ಆರಂಭವಾಗಲಿದೆ ಎಂದು ಉಳವಿ ಚನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ್ ಕಿತ್ತೂರು ತಿಳಿಸಿದ್ದಾರೆ. ಜಾತ್ರೆಯ ಮೊದಲ ದಿನ ಸಂಜೆ ವಿಶೇಷ ಸೀಮಾ ಪೂಜೆ ನಡೆಯಲಿದೆ.
ಕಾರವಾರದ ಪತ್ರಿಕಾ ಭವನದಲ್ಲಿ, ಉಳವಿ ಚನ್ನಬಸವೇಶ್ವರ ಟ್ರಸ್ಟ್ ಪರವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ
ಫೆ.3ಕ್ಕೆ ರಥೋತ್ಸವ: ಮಾಘಮಾಸದ ಶುಭಘಳಿಗೆಯಲ್ಲಿ ಫೆಬ್ರವರಿ 3ರಂದು ಉಳವಿ ರಥೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಸುಮಾರು 2000 ಚಕ್ಕಡಿಗಳು (ಎತ್ತಿನ ಗಾಡಿಗಳು) ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಭಕ್ತರಿಗೆ ಕುಡಿಯುವ ನೀರು, ವಸತಿ, ಸ್ವಚ್ಚತೆ, ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರು ಭರವಸೆ ನೀಡಿದರು.
ಬೆಳಕು, ಭದ್ರತೆಗೆ ವಿಶೇಷ ವ್ಯವಸ್ಥೆ: ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಮೊಕಾಶಿ ಮಾತನಾಡಿ, “ಭಕ್ತರ ವಸತಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಉಳವಿ ಬೀದಿಗಳಲ್ಲಿ ಹೆಚ್ಚುವರಿ ಬೆಳಕು ವ್ಯವಸ್ಥೆ ಕಲ್ಪಿಸಲು ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ತಮ್ಮ ಅನುದಾನದಿಂದ 3 ಲಕ್ಷ ರೂ. ನೆರವು ನೀಡಿದ್ದಾರೆ” ಎಂದರು.
ಇದನ್ನೂ ಓದಿ: ಸರ್ಕಾರದಿಂದ ‘ಲಿಕ್ಕರ್ ಗ್ಯಾರಂಟಿ’ ಯೋಜನೆ?: ಶಾಸಕ ಟೆಂಗಿನಕಾಯಿ ವ್ಯಂಗ್ಯ
ಇದೇ ಸಂದರ್ಭದಲ್ಲಿ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ಉಳವಿಗೆ ಬರುವ ಎಲ್ಲ ರಸ್ತೆ ಮಾರ್ಗಗಳ ದುರಸ್ತಿ ಹಾಗೂ ಸುಧಾರಣೆಗೆ ಅನುದಾನ ಒದಗಿಸಿ ರಸ್ತೆಗಳನ್ನು ಸುಸಜ್ಜಿತಗೊಳಿಸಿದ್ದಾರೆ ಎಂದು ತಿಳಿಸಿ, ಇದಕ್ಕಾಗಿ ಉಳವಿ ಟ್ರಸ್ಟ್ ಕೃತಜ್ಞತೆ ಸಲ್ಲಿಸಿದೆ ಎಂದು ಹೇಳಿದರು.
LED ಸ್ಕ್ರೀನ್, CCTV ಅಳವಡಿಕೆ: ಜಾತ್ರೆಯ ನಿಮಿತ್ತ, ಉಳವಿ ರಥ ಸಾಗುವ ಮಾರ್ಗದಲ್ಲಿ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ, 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ, ಮೈಕ್ ಮೂಲಕ ಸ್ವಚ್ಚತೆ ಮತ್ತು ಶಿಸ್ತು ಕುರಿತು ಅನೌನ್ಸ್‌ಮೆಂಟ್‌ಗಳು ನಡೆಯಲಿವೆ, ಜಿಲ್ಲಾಡಳಿತದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಟೌಟ್ ಕುಸಿತ: ಮೂವರು ಗಂಭೀರ ಗಾಯ
ಸರಾಯಿ–ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಪ್ರಯತ್ನ: ಉಳವಿ ಚನ್ನಬಸವೇಶ್ವರ ಟ್ರಸ್ಟ್ ಹಿರಿಯ ಸದಸ್ಯ ವಿರೇಶ್ ಕಂಬಳಿ ಮಾತನಾಡಿ, “ಈ ಬಾರಿ ಸರಾಯಿ ಮುಕ್ತ ಹಾಗೂ ಪ್ಲಾಸ್ಟಿಕ್ ಮುಕ್ತ ಜಾತ್ರೆ ನಡೆಸಲು ಪ್ರಯತ್ನ ಮಾಡಲಾಗುತ್ತಿದೆ. ಈ ಕುರಿತು ಭಕ್ತರು ಮತ್ತು ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದರು.
ಬಸ್ ವ್ಯವಸ್ಥೆ, ಸ್ವಚ್ಚತೆಗೆ ಆದ್ಯತೆ: ಸ್ಥಳೀಯ ಭಕ್ತರ ಜೊತೆಗೆ ಬೆಳಗಾವಿ, ಬೈಲಹೊಂಗಲ, ಧಾರವಾಡ, ಗೋಕರ್ಣ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರ ಅನುಕೂಲಕ್ಕಾಗಿ ಬೆಳಗಾವಿ, ಧಾರವಾಡ, ಗೋಕರ್ಣ, ಬೈಲಹೊಂಗಲದಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.









