ಬಳ್ಳಾರಿ: ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ–ಶ್ರೀರಾಮುಲು ಅವರಿಗೆ ಸಂಬಂಧಿಸಿದ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಅವರು ಘಟನೆಯ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.
ಶನಿವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಸ್ಪಿ ಪನ್ನೇಕರ್, “ನಿನ್ನೆ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಮನೆಗೆ ಬೆಂಕಿ ಹಾಕಲಾಗಿದೆ ಎಂಬ ದೂರು ಬಂದಿದೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ
8 ಜನ ವಶಕ್ಕೆ, ಇಬ್ಬರು ಅಪ್ರಾಪ್ತರು: ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ವಶಕ್ಕೆ ಪಡೆದವರಲ್ಲಿ ಇಬ್ಬರು ಅಪ್ರಾಪ್ತರು ಆಗಿದ್ದಾರೆ. “ವಶಕ್ಕೆ ಪಡೆದವರು ಯಾವುದೇ ರಾಜಕೀಯ ಹಿನ್ನಲೆ ಹೊಂದಿಲ್ಲ. ಇದೊಂದು ರಾಜಕೀಯ ಪ್ರೇರಿತ ಘಟನೆ ಎಂಬುದಕ್ಕೆ ಈ ಹಂತದಲ್ಲಿ ಯಾವುದೇ ಪುರಾವೆ ಸಿಕ್ಕಿಲ್ಲ” ಎಂದು ಎಸ್ಪಿ ಸ್ಪಷ್ಟಪಡಿಸಿದರು.
ರೀಲ್ಸ್–ಫೋಟೋ ಶೂಟ್ ಹಿನ್ನೆಲೆ: ಪ್ರಾಥಮಿಕ ತನಿಖೆಯಲ್ಲಿ, “ಈ ಯುವಕರು ರೀಲ್ಸ್ ಹಾಗೂ ಫೋಟೋ ಶೂಟ್ ಮಾಡುವ ಉದ್ದೇಶದಿಂದ ಮಾಡೆಲ್ ಹೌಸ್‌ಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಫೋಟೋ ಶೂಟ್‌ಗಾಗಿ ಅವರು ಮೊದಲ ಮಹಡಿಗೆ ತೆರಳಿದ್ದರು” ಎಂದು ಎಸ್ಪಿ ತಿಳಿಸಿದರು.
ಇದನ್ನೂ ಓದಿ: ಸರ್ಕಾರದಿಂದ ‘ಲಿಕ್ಕರ್ ಗ್ಯಾರಂಟಿ’ ಯೋಜನೆ?: ಶಾಸಕ ಟೆಂಗಿನಕಾಯಿ ವ್ಯಂಗ್ಯ
ಸಿಗರೇಟ್‌ನಿಂದ ಬೆಂಕಿ ಶಂಕೆ: “ಸಿಗರೇಟ್ ವಿಚಾರವಾಗಿ ಬೆಂಕಿ ತಗುಲಿರಬಹುದೆಂಬ ಶಂಕೆ ಇದೆ. ಆದರೆ ಇದನ್ನು ಖಚಿತಪಡಿಸಲು ಇನ್ನಷ್ಟು ಪರಿಶೀಲನೆ ಅಗತ್ಯವಿದೆ” ಎಂದು ಹೇಳಿದರು.
FSL ತಂಡದಿಂದ ಪರಿಶೀಲನೆ: ಘಟನಾ ಸ್ಥಳಕ್ಕೆ FSL (Forensic Science Laboratory) ತಂಡದಿಂದ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ ಎಸ್ಪಿ, “ದೂರಿನಲ್ಲಿ ತಿಳಿಸಿದಂತೆ ಯಾವುದೇ ವಸ್ತುಗಳು ಸುಟ್ಟುಹೋಗಿರುವುದು ಪ್ರಾಥಮಿಕವಾಗಿ ಕಂಡುಬಂದಿಲ್ಲ. ಅಲ್ಲದೆ, ಈ ಮಾಡೆಲ್ ಹೌಸ್‌ನಲ್ಲಿ ಅಂತಹ ವಸ್ತುಗಳು ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸಿದೆ” ಎಂದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಟೌಟ್ ಕುಸಿತ: ಮೂವರು ಗಂಭೀರ ಗಾಯ
ಖಾಲಿ ಮಾಡೆಲ್ ಹೌಸ್: ಈ ಮನೆ ರಿಯಲ್ ಎಸ್ಟೇಟ್ ಲೇಔಟ್‌ನಲ್ಲಿರುವ ಮಾಡೆಲ್ ಹೌಸ್ ಆಗಿದ್ದು, “ಇಲ್ಲಿ ಯಾರೂ ವಾಸವಿರಲಿಲ್ಲ. ಇದು ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಆಸ್ತಿ” ಎಂದು ಎಸ್ಪಿ ಸ್ಪಷ್ಟಪಡಿಸಿದರು.
CCTV, ಭದ್ರತೆ ಕೊರತೆ: ಲೇಔಟ್‌ನಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಇರಲಿಲ್ಲ, ಭದ್ರತಾ ಸಿಬ್ಬಂದಿಯೂ ನೇಮಿಸಲಾಗಿರಲಿಲ್ಲ, ಎಂದು ತಿಳಿಸಿದ ಎಸ್ಪಿ, “ಈ ಮಾಡೆಲ್ ಹೌಸ್‌ಗೆ ದಿನನಿತ್ಯ ಸಾಕಷ್ಟು ಜನರು ಬಂದು ಹೋಗುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ” ಎಂದರು.
ಇದನ್ನೂ ಓದಿ: ರಾಜ್ಯಪಾಲರ ನಡೆ ಸಂವಿಧಾನ ಬಾಹಿರ : ಸಲೀಂ ಅಹ್ಮದ್ ಆಕ್ರೋಶ
ಅನೈತಿಕ ಚಟುವಟಿಕೆ ತಡೆಗೆ ಕ್ರಮ: “ಖಾಲಿ ಲೇಔಟ್‌ಗಳು ಹಾಗೂ ನಿರ್ಜನ ಪ್ರದೇಶಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಸ್ಪಿ ಸುಮನ್ ಡಿ. ಪನ್ನೇಕರ್ ಹೇಳಿದರು. ಪ್ರಕರಣದ ಕುರಿತು ಇನ್ನೂ ತನಿಖೆ ಮುಂದುವರಿದಿದ್ದು, ಪೂರ್ಣ ಪರಿಶೀಲನೆಯ ನಂತರವೇ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದರು.























