ಸರ್ಕಾರದಿಂದ ‘ಲಿಕ್ಕರ್ ಗ್ಯಾರಂಟಿ’ ಯೋಜನೆ?: ಶಾಸಕ ಟೆಂಗಿನಕಾಯಿ ವ್ಯಂಗ್ಯ

0
22

ಹುಬ್ಬಳ್ಳಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ವಿತರಣೆ ಮಾಡಲಾಗುತ್ತಿರುವ 42,345 ಮನೆಗಳ ಹಂಚಿಕೆ ಕಾರ್ಯಕ್ರಮದ ನೆಪದಲ್ಲಿ ರಾಜ್ಯ ಸರ್ಕಾರ ಮದ್ಯ ವಿತರಣೆಗೂ ಪರೋಕ್ಷ ಉತ್ತೇಜನ ನೀಡುತ್ತಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ತೀವ್ರವಾಗಿ ಆರೋಪಿಸಿದ್ದಾರೆ.

ನಗರದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, “ಹುಬ್ಬಳ್ಳಿಯಲ್ಲಿ ನಡೆಯಲಿರುವ ಈ ಬೃಹತ್ ಕಾರ್ಯಕ್ರಮಕ್ಕೆ ಸುಮಾರು ಎರಡುವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಮದ್ಯ ವ್ಯಾಪಾರಸ್ಥರು ಹೆಚ್ಚುವರಿ ಮದ್ಯ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಅಬಕಾರಿ ಇಲಾಖೆಯ ಹುಬ್ಬಳ್ಳಿ ರೇಂಜ್–1 ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅಧಿಕಾರಿಯೊಬ್ಬರು ಸಂದೇಶ ಕಳುಹಿಸಿದ್ದಾರೆ” ಎಂದು ಆರೋಪಿಸಿದರು. ಈ ಕುರಿತ ದಾಖಲೆಗಳನ್ನೂ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು.

ಇದನ್ನೂ ಓದಿ:  ಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ

‘ಮನೆ ಗ್ಯಾರಂಟಿ ಅಲ್ಲ, ಲಿಕ್ಕರ್ ಗ್ಯಾರಂಟಿ’: “ಸರ್ಕಾರದ ಗ್ಯಾರಂಟಿ ಯೋಜನೆಗಳ ಸಾಲಿಗೆ ಇದೀಗ ‘ಲಿಕ್ಕರ್ ಗ್ಯಾರಂಟಿ’ ಯೋಜನೆಯೂ ಸೇರಿಕೊಂಡಂತಾಗಿದೆ. ಮನೆ ಹಂಚಿಕೆ ಕಾರ್ಯಕ್ರಮಕ್ಕಿಂತ ಸರ್ಕಾರಕ್ಕೆ ಮದ್ಯ ಮಾರಾಟವೇ ಮುಖ್ಯವಾಗಿದೆಯೇ?” ಎಂದು ಶಾಸಕ ಟೆಂಗಿನಕಾಯಿ ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸೇರಿದಂತೆ ಸಂಪುಟದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಮದ್ಯದ ಅಂಗಡಿಗಳು ಸಾಕಷ್ಟು ಮದ್ಯ ಸಂಗ್ರಹಿಸಿಟ್ಟುಕೊಳ್ಳಬೇಕು ಎನ್ನುವ ಸಂದೇಶ ಏನನ್ನು ಸೂಚಿಸುತ್ತದೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:  ಬೆಲ್ ಬಾಟಮ್ ನಿರ್ಮಾಪಕರಿಂದ ‘ಹುಬ್ಬಳ್ಳಿ ಹಂಟರ್ಸ್’ ಘೋಷಣೆ

ಸಿಎಂ ಸ್ಪಷ್ಟನೆ ನೀಡಬೇಕು: “ರಾಜ್ಯ ಸರ್ಕಾರಕ್ಕೆ ಮನೆ ಹಂಚಿಕೆ ಮುಖ್ಯವೋ, ಮದ್ಯ ಹಂಚಿಕೆ ಮುಖ್ಯವೋ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು” ಎಂದು ಅವರು ಆಗ್ರಹಿಸಿದರು.

ರಾಜಕೀಯ ಉದ್ದೇಶದ ಆರೋಪ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ಥಳೀಯವಾಗಿ ಇಲ್ಲದಿರುವುದನ್ನು ಗಮನಿಸಿ, ತರಾತುರಿಯಲ್ಲಿ ಮನೆ ಹಂಚಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟೆಂಗಿನಕಾಯಿ ಆರೋಪಿಸಿದರು. “ಈ ಹಿಂದೆ ವಿವಿಧ ಕಾರಣಗಳಿಂದ ಎರಡು–ಮೂರು ಬಾರಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಅದೇ ರೀತಿ ಈ ಬಾರಿಯೂ ಮುಂದೂಡಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿ ಕೇಂದ್ರ ಸಚಿವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ” ಎಂದು ಟೀಕಿಸಿದರು.

ಇದನ್ನೂ ಓದಿ:  24ರಂದು ಅಥಣಿಗೆ ಕ್ರೇಜಿಸ್ಟಾರ್ ರವಿಚಂದ್ರನ್

ಮುಖಂಡರ ಉಪಸ್ಥಿತಿ: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಮಣ್ಣ ಗೌಡರ, ರವಿ ನಾಯ್ಕ, ಪ್ರವೀಣ ಪವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Previous articleಬಳ್ಳಾರಿ: ಜನಾರ್ದನ ರೆಡ್ಡಿ ‘ಮಾಡೆಲ್ ಹೌಸ್’ಗೆ ಬೆಂಕಿ: 8 ಯುವಕರು ವಶಕ್ಕೆ, ರೀಲ್ಸ್ ಶಂಕೆ