ಜೋಯಿಡಾದಲ್ಲಿ ಅಡಿಕೆ ಕೊಯ್ಲಿನ ಭರಾಟೆ

0
5

ಸಾವಯವ ಕೃಷಿಯತ್ತ ಮಾದರಿಯಾಗಿ ಸಾಗುತ್ತಿರುವ ಜೋಯಡಾ ತಾಲೂಕಿನಲ್ಲಿ ಮುರಿಯಾಳು ಪದ್ಧತಿ ಜೀವಂತ

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನಾದ್ಯಂತ ಈ ದಿನಗಳಲ್ಲಿ ಅಡಿಕೆ ಕೊನೆ ಕೊಯ್ಲಿನ ಭರಾಟೆ ಜೋರಾಗಿದೆ. ಊರೂರಲ್ಲೂ ನೋಡಿದರೆ ಅಡಿಕೆ ಕೊಯ್ಲಿನ ಚರ್ಚೆಯೇ ಮುಂಚೂಣಿಯಲ್ಲಿದೆ. ಯಾರ ಮನೆಗೆ ಹೋದರೂ “ನಿಮ್ಮ ಕೊನೆ ಕೊಯ್ಲು ಮುಗಿದಿತಾ?”, “ನಮ್ಮ ಕಡೆ ಇನ್ನೂ ಮುಗಿದಿಲ್ಲ… ಚಳಿ ಜಾಸ್ತಿ” ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದು ಅಡಿಕೆ ಬೆಳೆಗಾರರ ಬದುಕಿನ ಅತ್ಯಂತ ಕಠಿಣ ಆದರೆ ಅಷ್ಟೇ ಜವಾಬ್ದಾರಿಯ ಸಮಯ. ಸಮಯವನ್ನು ಸರಿಯಾಗಿ ಬಳಸಿಕೊಂಡು ಕೊನೆ ಕೊಯ್ಲು ಪೂರ್ಣಗೊಳಿಸಿ ಕೊಳ್ಳಬೇಕೆಂಬ ಚಿಂತೆಯಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ. ಆಳುಗಳ ಕೊರತೆ ಈ ಬಾರಿ ತೀವ್ರವಾಗಿ ಕಾಡುತ್ತಿರುವುದರಿಂದ, ಬಹುತೇಕ ರೈತರು ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಊರಿನವರೊಂದಿಗೆ ಸೇರಿ ಮುರಿಯಾಳು ಪದ್ಧತಿಯಲ್ಲಿ ಅಡಿಕೆ ಸುಲಿಯುವ ಕೆಲಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿ: ಮೆಟ್ರೋ ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ

ಕೆಲವು ಕಡೆಗಳಲ್ಲಿ ರೈತರು ಅಡಿಕೆಯ ಜೊತೆಗೆ ತಮ್ಮ ಭತ್ತದ ಒಕ್ಕಣೆ ಕೆಲಸವನ್ನೂ ಸಮಾಂತರವಾಗಿ ಮಾಡುತ್ತಿದ್ದಾರೆ. ಮುರಿಯಾಳು, ಲೆಕ್ಕದ ಆಳು, ಸುಲಿದ ಅಡಿಕೆ ತೂಕದ ಆಳುಗಳು — ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಲ್ಲಿ ತೊಡಗಿಸಿಕೊಂಡು ಇನ್ನೂ ಹಲವು ತಿಂಗಳುಗಳ ಕಾಲ ಅಡಿಕೆ ಸಂಬಂಧಿಸಿದ ಕೆಲಸಗಳಲ್ಲಿ ನಿರತರಾಗಿರುತ್ತಾರೆ.

ಏನಿದು ಮುರಿಯಾಳು ಪದ್ಧತಿ? : ಅಡಿಕೆ ಕೊನೆ ಕೊಯ್ಲಿನ ಭರಾಟೆಯ ಈ ಸಂದರ್ಭದಲ್ಲೇ ಮತ್ತೆ ಜೀವಂತವಾಗುತ್ತಿರುವುದು ಮುರಿಯಾಳು ಪದ್ಧತಿ. ಹಿಂದಿನ ಕಾಲದಲ್ಲಿ ಅಕ್ಕಪಕ್ಕದವರು “ಇಂದು ನನ್ನ ಕೆಲಸ, ನಾಳೆ ನಿನ್ನ ಕೆಲಸ” ಎಂಬಂತೆ ಪರಸ್ಪರ ಸಹಾಯದಿಂದ ಕೆಲಸ ಮುಗಿಸುವ ಪದ್ಧತಿ ಇತ್ತು. ದಿನವಿಡೀ ಒಬ್ಬರ ಮನೆಯ ಕೆಲಸ ಮುಗಿಸಿದ ನಂತರ, ಯಾರ ಮನೆಗೆ ಎಷ್ಟು ಆಳು ಹೋದರು ಎಂಬ ಲೆಕ್ಕವನ್ನು ಉಳಿಸಿಕೊಂಡು, ಉಳಿದ ಆಳಿಗೆ ಇಂತಿಷ್ಟು ಎಂದು ಲೆಕ್ಕ ಸರಿಪಡಿಸುವ ರೂಢಿಯೇ ಮುರಿಯಾಳು ಎಂದು ಕರೆಸಿಕೊಳ್ಳುತ್ತದೆ.

ಇದನ್ನೂ ಓದಿ:  ಕ್ರಾಸಿಂಗ್‌ನಲ್ಲಿ ನಿಂತಿದ್ದ ಟ್ರಕ್‌ಗೆ ರೈಲು ಡಿಕ್ಕಿ: ವಿಡಿಯೋ ವೈರಲ್

ಇಂದಿಗೂ ಜೋಯಡಾ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈ ಪದ್ಧತಿ ಜೀವಂತವಾಗಿದ್ದು, ಇದು ಗ್ರಾಮಸ್ಥರ ಮಧ್ಯೆ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಒಳ ಪ್ರದೇಶಗಳ ಗ್ರಾಮಗಳಿಗೆ ಅಪರಿಚಿತರು ಸುಲಭವಾಗಿ ಓಡಾಡಲು ಹಿಂಜರಿಯುವಂತಿರುವುದಕ್ಕೂ ಈ ಜನಸಾಮಾನ್ಯರ ಒಗ್ಗಟ್ಟೇ ಪ್ರಮುಖ ಕಾರಣವಾಗಿದೆ.

ಇಂತಹ ಪರಸ್ಪರ ಸಹಕಾರ, ಸಾಮಾಜಿಕ ಬಾಂಧವ್ಯ ಮತ್ತು ಪ್ರಕೃತಿಯೊಂದಿಗಿನ ಜೀವನಶೈಲಿಯಿಂದಾಗಿ ಜೋಯಡಾ ತಾಲೂಕು ಇಂದು ಸಾವಯವ ಕೃಷಿಯತ್ತ ಮಾದರಿಯಾಗಿ ಸಾಗುತ್ತಿದೆ. ಅಡಿಕೆ ಕೊನೆ ಕೊಯ್ಲಿನ ಈ ಕಾಲ ಕಷ್ಟಕರವಾದರೂ, ಗ್ರಾಮೀಣ ಬದುಕಿನ ಸೌಂದರ್ಯ, ಆನಂದ ಮತ್ತು ಮಾನವೀಯತೆಯನ್ನು ಮರುಸ್ಮರಿಸುವ ಸಂದರ್ಭವಾಗಿಯೂ ಪರಿಣಮಿಸಿದೆ.

Previous articleಹುಬ್ಬಳ್ಳಿ: ಮೆಟ್ರೋ ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ