ಡೋಡ (ಜಮ್ಮು ಕಾಶ್ಮೀರ): ಭಾರತೀಯ ಸೇನೆಯ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದ್ದು, ಹತ್ತು ಜನ ಯೋಧರು ಮೃತರಾಗಿದ್ದಾರೆ.
ದೋಡಾ ಜಿಲ್ಲೆಯ ಕಹಾನ್ನಿ ಪ್ರದೇಶದ ಬಹಾದೆರ್‌ವಾಹ್-ಚಂಬ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಎತ್ತರ ಪ್ರದೇಶದಲ್ಲಿರುವ ಆರ್ಮಿ ಪೋಸ್ಟ್ ನಿರ್ವಹಿಸಲು ಯೋಧರನ್ನು ಕರೆದುಕೊಂಡು ಹೋಗುತ್ತಿದ್ದಾಗ ವಾಹನ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿದೆ.
ಕೂಡಲೇ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಸೇನೆ ಮತ್ತು ಜಮ್ಮು ಪೊಲೀಸರು ಪ್ರಾರಂಭಿಸಿದರು. ನಾಲ್ಕು ಯೋಧರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಉಳಿದ ಹನ್ನೊಂದು ಯೋಧರನ್ನು ಗಾಯಗೊಂಡ ಸ್ಥಿತಿಯಲ್ಲಿ ರಕ್ಷಣೆ ಮಾಡಲಾಯಿತಾದರೂ, ನಂತರ ಅವರಲ್ಲಿ ಆರು ಜನ ಯೋಧರು ಅಸುನೀಗಿದರು.
ಒಬ್ಬ ಯೋಧನನ್ನು ಬಹಾದೆರ್‌ವಾಹ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಗಂಭೀರ ಗಾಯಗೊಂಡ ಹತ್ತು ಯೋಧರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಧಮ್‌ಪುರ ಮಿಲಿಟರಿ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ಘಟನೆಯ ಬಗ್ಗೆ ರಕ್ಷಾಣಾ ಸಚಿವ ರಾಜ್‌ನಾಥ್ ಸಿಂಗ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.





















