Home ಸುದ್ದಿ ರಾಜ್ಯ ರಾಸಲೀಲೆ ವಿಡಿಯೋ ಪ್ರಕರಣ: DGP ರಾಮಚಂದ್ರ ರಾವ್ ಅಮಾನತು

ರಾಸಲೀಲೆ ವಿಡಿಯೋ ಪ್ರಕರಣ: DGP ರಾಮಚಂದ್ರ ರಾವ್ ಅಮಾನತು

0
36

ಬೆಂಗಳೂರು: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (DCRE) ಮಹಾನಿರ್ದೇಶಕರಾಗಿದ್ದ ಡಿಜಿಪಿ ಡಾ. ಕೆ. ರಾಮಚಂದ್ರ ರಾವ್ ಅವರನ್ನು ಕರ್ನಾಟಕ ಸರ್ಕಾರ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಕಚೇರಿಯೊಳಗೇ ಮಹಿಳೆಯೊಂದಿಗಿನ ಅಸಭ್ಯ ವರ್ತನೆಯ ವಿಡಿಯೋ ಹಾಗೂ ಆಡಿಯೋ ರಾಜ್ಯಾದ್ಯಂತ ವೈರಲ್ ಆದ ಬೆನ್ನಲ್ಲೇ ಈ ಮಹತ್ವದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರದ ಆದೇಶದ ಪ್ರಕಾರ, ಡಾ. ಕೆ. ರಾಮಚಂದ್ರ ರಾವ್ ಅವರ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಈ ವರ್ತನೆಯು ಸರ್ಕಾರಿ ನೌಕರನಿಗೆ ತಕ್ಕದಲ್ಲದ ಮತ್ತು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡುವಂತಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ…!

ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರದ ಗೌರವ ಹಾಗೂ ಆಡಳಿತಾತ್ಮಕ ಶಿಸ್ತಿನ ಮೇಲೆ ಪರಿಣಾಮ ಬೀರುವಂತಹದ್ದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ವಿಡಿಯೋ ವೈರಲ್ ಆದ ತಕ್ಷಣವೇ ಆಡಿಯೋ ಕ್ಲಿಪ್‌ಗಳು ಸಹ ಹರಿದಾಡಿದ್ದು, ಸರ್ಕಾರದ ಮಟ್ಟದಲ್ಲಿ ತುರ್ತು ಗಮನ ಸೆಳೆದಿತ್ತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ಬಗ್ಗೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಜೊತೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾಕ್ಟರ್ ಎಂ.ಎಸ್. ಸಲೀಂ ಅವರಿಗೆ ಪ್ರಾಥಮಿಕ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವಂತೆ ಸೂಚಿಸಲಾಗಿತ್ತು. ಪರಿಶೀಲನೆಯ ನಂತರ ಸರ್ಕಾರವು ಡಾ. ರಾಮಚಂದ್ರ ರಾವ್ ಅವರನ್ನು ತಕ್ಷಣದ ಪರಿಣಾಮದಿಂದ ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಪತ್ರಕರ್ತರ ಊಟಕ್ಕಾಗಿ 2 ಲಕ್ಷ ವಸೂಲಿ…!

ಆದೇಶದಲ್ಲಿ ಅಮಾನತ್ತಿನ ಅವಧಿಯಲ್ಲಿ ಅಧಿಕಾರಿಗೆ ನಿಯಮಾನುಸಾರ ಮೂಲಭೂತ ಜೀವನ ವೆಚ್ಚ ಭತ್ಯೆ (Subsistence Allowance) ನೀಡಲಾಗುವುದು ಎಂದು ತಿಳಿಸಲಾಗಿದೆ. ಜೊತೆಗೆ, ಅಮಾನತ್ತಿನ ಅವಧಿಯಲ್ಲಿ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ಕಾರಣಕ್ಕೂ ಕೇಂದ್ರ ಕಚೇರಿಯನ್ನು ಅಥವಾ ಹೆಡ್‌ಕ್ವಾರ್ಟರ್‌ನ್ನು ಬಿಟ್ಟು ಹೋಗುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿಜಿಪಿ ಡಾ. ರಾಮಚಂದ್ರ ರಾವ್, ವೈರಲ್ ಆಗಿರುವ ವಿಡಿಯೋ ಹಾಗೂ ಆಡಿಯೋಗಳು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದವು ಮತ್ತು ತಮ್ಮ ವಿರುದ್ಧ ನಡೆದ ಷಡ್ಯಂತ್ರದ ಭಾಗ ಎಂದು ಸ್ಪಷ್ಟೀಕರಣ ನೀಡಿದ್ದರು. ಆದರೆ ಸರ್ಕಾರವು ಸಾರ್ವಜನಿಕವಾಗಿ ಉಂಟಾದ ಪರಿಣಾಮ ಹಾಗೂ ಆಡಳಿತಾತ್ಮಕ ಶಿಸ್ತಿನ ದೃಷ್ಟಿಯಿಂದ ವಿಚಾರಣೆ ಅಗತ್ಯವೆಂದು ಪರಿಗಣಿಸಿ ಅಮಾನತು ಆದೇಶ ಹೊರಡಿಸಿದೆ.

ಇದನ್ನೂ ಓದಿ: AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ

ಗಮನಾರ್ಹವಾಗಿ, ಡಾ. ರಾಮಚಂದ್ರ ರಾವ್ ಅವರ ನಿವೃತ್ತಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ರಾಜ್ಯ ಆಡಳಿತ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಮುಂದಿನ ತನಿಖೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಅವಲಂಬಿತವಾಗಿರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.