2028ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ಖಚಿತ

0
13

ಯಾದಗಿರಿ: 2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷ ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲ ಹಾಲಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಗಳಾಗುವುದು ಖಡಾ ಖಂಡಿತ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಗುರುಮಠಕಲ್ ಮತಕ್ಷೇತ್ರದ ಅಲ್ಲಿಪೂರ ಗ್ರಾಮದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಹಮ್ಮಿಕೊಂಡ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರು, ಕಾರ್ಯಕರ್ತರನ್ನು ಪಕ್ಷದ ಧ್ವಜ ನೀಡಿ ಸೇರ್ಪಡೆ ಮಾಡಿಕೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣೆಯಲ್ಲಿ ಜೆಡಿಎಸ್‌ಗೆ ಎಷ್ಟು ಸೀಟ್‌ಗಳು ಬರುತ್ತವೆ ಎಂಬುವುದು ಮುಖ್ಯವಲ್ಲ, ಆದರೆ ಜೆಡಿಎಸ್-ಬಿಜೆಪಿ ಮೈತ್ರಿ ಗಾಡವಾಗಿದ್ದರಿಂದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮೊತ್ತೊಮ್ಮೆ ರಾಜ್ಯದ ಸಿಎಂ ಆಗುವುದು ಯಾರಿಂದಲೂ ತಪ್ಪಿಸಲಾಗದು ಎಂದು ಹೇಳಿದರು.

ಇದನ್ನೂ ಓದಿ: ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ

ಗುರಮಠಕಲ್ ಪಟ್ಟಣಕ್ಕೆ ಮನೆಮನೆಗೆ ಕುಡಿಯುವ ನೀರು, 50 ಹಾಸಿಗೆಯ ಆಸ್ಪತ್ರೆ, ಅಗ್ನಿಶಾಮಕ ಠಾಣೆ, ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಮೂರ್ತಿ, ಒಂದು ಕೋಟಿ ರೂ. ವೆಚ್ಚದಲ್ಲಿ ಕನಕ ಭವನ, 185 ಕೋಟಿ ರೂ. ವೆಚ್ಚದ ಕೆರೆ ತುಂಬುವ ಯೋಜನೆ, ಅಲ್ಲಿಪುರ, ಹತ್ತಿಕುಣಿ ಆಸ್ಪತ್ರೆ ನಿರ್ಮಾಣ, ಹತ್ತಿಕುಣಿ ಜಲಾಶಯದ ನಾಲಾ ಆಧುನೀಕರಣಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಬಳಿ ಮನವಿ ಮಾಡಿ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದು ತಮ್ಮ ಅವಧಿಯಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟ ಶಾಸಕರು, ಕಳೆದ 50 ವರ್ಷ ನೀವೇ ಅಧಿಕಾರ ನಡೆಸಿದ್ದೀರಲ್ಲ? ಯಾಕೆ ಮೂಲಸೌಕರ್ಯ ಕಲ್ಪಿಸಲಿಲ್ಲ ಎಂದು ಕೈ ನಾಯಕರನ್ನು ಪ್ರಶ್ನಿಸಿದರು.

ಮತಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಪದೇ ಪದೇ ಅನವಶ್ಯಕವಾಗಿ ರಾಜಕೀಯ ಮಾಡುವುದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ನಮ್ಮ ವಿರೋಧಿಗಳು ಮರೆಯಕೂಡದು ವಿರೋಧಿಗಳ ಟೀಕೆಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುವೆ ಎಂದು ಟಾಂಗ್ ನೀಡಿದರು.

ತಮ್ಮ ಭಾಷಣದ ಆರಂಭದಿಂದಲೂ ಹೆಸರು ಹೇಳದೆಯೇ, ಕ್ಷೇತ್ರದ ಕೈ ನಾಯಕರಿಗೆ ಚಾಟಿ ಬೀಸಿದ ಶಾಸಕರು ನಾನು ಗುತ್ತೇದಾರಿಕೆ ಮಾಡುತ್ತಿಲ್ಲ. ಮದ್ಯದಂಗಡಿ ನಡೆಸುತ್ತಿಲ್ಲ. ಕೈಗಾರಿಕೆ ವಸಾಹತುಗಳಲ್ಲಿ ಹಣ ಪಡೆದುಕೊಂಡಿಲ್ಲ. ಬದಲಾಗಿ ಕ್ಷೇತ್ರದ ಜನ ಹೇಳಿದ ಎಲ್ಲ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದರು.

Previous articleಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವದ ಆಯೋಜನೆ