ವಿಜಯಪುರದಿಂದ ಮುಂಬೈವರೆಗೆ ವಿಜಯದ ಓಟ!

0
1

ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್‌ನ 10 ಸದಸ್ಯರ ಭಾಗವಹಿಸುವಿಕೆ ಹೆಮ್ಮೆಯ ಸಂಗತಿ: ಎಂ.ಬಿ. ಪಾಟೀಲ್

ವಿಜಯಪುರ: ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರೂಪ್ (VCG)ನ 10 ಸದಸ್ಯರು ಭಾಗವಹಿಸುತ್ತಿರುವುದು ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಹಾಗೂ ವಿಜಯಪುರ ಶಾಸಕ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಒಂದು ಕಾಲದಲ್ಲಿ ವಿಜಯಪುರದಲ್ಲಿ ಓಟವೆಂಬುದು ಅಪರೂಪದ ವಿಚಾರವಾಗಿತ್ತು. ಆದರೆ ಇಂದು ವಿಜಯಪುರ ಓಟಗಾರರ ನಗರವಾಗಿ ರೂಪುಗೊಳ್ಳುತ್ತಿದೆ. ಈ ಬದಲಾವಣೆಗೆ ವಿಜಯಪುರ ಸೈಕ್ಲಿಂಗ್ ಗ್ರೂಪ್ (#VCG) ಮಹತ್ತರ ಪಾತ್ರವಹಿಸಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ರಸ್ತೆ ಅಪಘಾತ: ಮಾಜಿ ಸಚಿವ ರಾಜೂಗೌಡ ಪ್ರಾಣಾಪಾಯದಿಂದ ಪಾರು

ಇತ್ತೀಚೆಗೆ ವಿಜಯಪುರದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್‌ನಲ್ಲಿ 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸಿ ದಾಖಲೆ ನಿರ್ಮಿಸಿರುವುದು ವಿಜಯಪುರದ ಕ್ರೀಡಾ ಚೈತನ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದ್ದಾರೆ. ಇಂತಹ ವಾತಾವರಣದ ನಡುವೆಯೇ ಇದೀಗ 42 ಕಿಲೋಮೀಟರ್‌ಗಳ ದೀರ್ಘ ಮ್ಯಾರಥಾನ್ ಓಟವಾದ ಟಾಟಾ ಮುಂಬೈ ಮ್ಯಾರಥಾನ್‌ನಲ್ಲಿ ವಿಜಯಪುರದ 10 ಧೈರ್ಯಶಾಲಿ ಓಟಗಾರರು ಭಾಗವಹಿಸುತ್ತಿರುವುದು ಅತ್ಯಂತ ಸ್ಫೂರ್ತಿದಾಯಕ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

“ಈ ಓಟದಲ್ಲಿ ಭಾಗವಹಿಸಿರುವ ವಿಜಯಪುರದ ಎಲ್ಲ ಸದಸ್ಯರು ಯಶಸ್ವಿಯಾಗಲಿ. ಬಸವನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ” ಎಂದು ಎಂ.ಬಿ. ಪಾಟೀಲ್ ಹಾರೈಸಿದ್ದಾರೆ.

ಇದನ್ನೂ ಓದಿ:  ಹೈಕಮಾಂಡ್ ಬೀದಿ‌ದಾಸಯ್ಯ ಸಿಎಂ ಮಾಡಿದರೂ ಒಪ್ಪಬೇಕಾಗುತ್ತದೆ

ವಿಜಯಪುರದ ಕ್ರೀಡಾ ಸಂಸ್ಕೃತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಯುವಕರನ್ನು ಆರೋಗ್ಯಕರ ಜೀವನಶೈಲಿಯತ್ತ ಕೊಂಡೊಯ್ಯುವಲ್ಲಿ ಇಂತಹ ಸಂಘಟನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. “ವಿಜಯಪುರ ಓಡುತ್ತಿದೆ… ವಿಜಯಪುರ ಗೆಲ್ಲುತ್ತಿದೆ!” ಎಂಬ ಘೋಷಣೆ ಇಂದು ಕೇವಲ ಮಾತಲ್ಲ, ಜಿಲ್ಲೆಯ ಹೊಸ ಗುರುತಾಗುತ್ತಿದೆ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.

Previous articleಗುಂಡೇಟಿನಿಂದ ಮೃತಪಟ್ಟ ರಾಜಶೇಖರ ಮನೆಗೆ ಬಿಜೆಪಿ ನಾಯಕರ ಭೇಟಿ