ಬಳ್ಳಾರಿ: ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ – ಕಾರಜೋಳ

0
5

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತುಹೋಗಿದ್ದಾರೆ

ಬಳ್ಳಾರಿ: ಬಳ್ಳಾರಿಯಲ್ಲಿ ನಡೆದ ಬಿಜೆಪಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರೆ ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಸರ್ಕಾರದ ದುರಾಡಳಿತದಿಂದ ಜನ ಸಂಪೂರ್ಣವಾಗಿ ಬೇಸತ್ತುಹೋಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುವಂತಾಗಿದೆ ಎಂದು ಕಾರಜೋಳ ಆರೋಪಿಸಿದರು.

ಇದನ್ನೂ ಓದಿ:  ಬಳ್ಳಾರಿ: ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ

“ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ತಾರೆ. ನಾನು ಇದನ್ನು ಬಳ್ಳಾರಿ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ. ನಾನು ಶರಣರ ನಾಡಿನಿಂದ ಬಂದವನು. ನಾವು ಏನು ಹೇಳ್ತೀವೋ, ಅದು ಆಗಿಯೇ ಇದೆ” ಎಂದು ಕಾರಜೋಳ ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣವನ್ನು ಉಲ್ಲೇಖಿಸಿದ ಅವರು, “ಬಳ್ಳಾರಿ ನೆಲದಲ್ಲಿ ಗುಂಡಿನ ದಾಳಿ ನಡೆದು ಅಮಾಯಕ ಶಾಸಕನೊಬ್ಬ ಸಾವನ್ನಪ್ಪಿದ್ದಾನೆ. ಇಂತಹ ಗಂಭೀರ ಪ್ರಕರಣದಲ್ಲಿ ಕೂಡಲೇ ಭರತ್ ರೆಡ್ಡಿಯನ್ನು ಬಂಧಿಸಬೇಕಿತ್ತು. ಆದರೆ ಅವರ ವಿರುದ್ಧ ಕೇಸ್ ಕೂಡ ದಾಖಲಿಸಿಲ್ಲ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ” ಎಂದು ಆರೋಪಿಸಿದರು.

ಇದನ್ನೂ ಓದಿ:  ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ಇನ್ನಿಲ್ಲ

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕಿನ ಮೇಲೂ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಟೀಕಿಸಿದ ಕಾರಜೋಳ, “ನಾವು ಪ್ರತಿಭಟನೆ ಮಾಡಲು 50 ಲಕ್ಷ ರೂಪಾಯಿ ಡಿಪಾಸಿಟ್ ಇಡಬೇಕು ಎಂದು ಸರ್ಕಾರ ಹೇಳುತ್ತಿದೆ. ಬ್ರಿಟಿಷರ ಕಾಲದಲ್ಲೂ ಸಾರ್ವಜನಿಕ ಸಭೆ–ಸಮಾರಂಭಗಳಿಗೆ ಇಂತಹ ಅಡ್ಡಿ ಇರಲಿಲ್ಲ. ಬ್ರಿಟಿಷರು ದುರಾಡಳಿತ ನಡೆಸಿದಾಗ ಜನ ಅವರನ್ನು ಓಡಿಸಿದರು” ಎಂದು ನೆನಪಿಸಿದರು.

ಇದೀಗ ರಾಜ್ಯದಲ್ಲಿ ಅದೇ ಪರಿಸ್ಥಿತಿ ನಿರ್ಮಾಣವಾಗಿದ್ದು, “ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಓಡಿಸುವ ಕಾಲ ಹತ್ತಿರ ಬಂದಿದೆ” ಎಂದು ಕಾರಜೋಳ ಕಿಡಿಕಾರಿದರು.

ಇದನ್ನೂ ಓದಿ:  ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ: ಸದ್ಯ ಸರ್ವೆ ಇಲ್ಲ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಬಳ್ಳಾರಿಯಿಂದ ಆರಂಭವಾದ ಈ ಪ್ರತಿಭಟನಾ ಸಮಾವೇಶ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟಕ್ಕೆ ಕಾರಣವಾಗಲಿದೆ ಎಂದು ಬಿಜೆಪಿ ನಾಯಕರು ಈ ಮೂಲಕ ಎಚ್ಚರಿಕೆ ನೀಡಿದರು.

Previous articleಬಳ್ಳಾರಿ: ಬಿಜೆಪಿ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಚಾಲನೆ