Home ನಮ್ಮ ಜಿಲ್ಲೆ ಉತ್ತರ ಕನ್ನಡ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ: ಸದ್ಯ ಸರ್ವೆ ಇಲ್ಲ

ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ: ಸದ್ಯ ಸರ್ವೆ ಇಲ್ಲ

0
20

ಅರಣ್ಯ ಇಲಾಖೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ – ದಾಂಡೇಲಿಯಲ್ಲಿ ಸಿಸಿಎಫ್ ಟಿ. ಹೀರಾಲಾಲ್ ಸ್ಪಷ್ಟನೆ

ದಾಂಡೇಲಿ (ಉತ್ತರ ಕನ್ನಡ): ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿರುವ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯ ಸರ್ವೆ ಕಾರ್ಯ ಸದ್ಯಕ್ಕೆ ನಡೆಯುವುದಿಲ್ಲ ಎಂದು ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಅವರು ಸ್ಪಷ್ಟಪಡಿಸಿದ್ದಾರೆ.

ದಾಂಡೇಲಿಯಲ್ಲಿ ಹಳಿಯಾಳ ಅರಣ್ಯ ವಿಭಾಗದ ವತಿಯಿಂದ ಆಯೋಜಿಸಲಾದ ಹಾರ್ನ್‌ಬಿಲ್ ಹಬ್ಬದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಈ ಯೋಜನೆಗೆ ಸಂಬಂಧಿಸಿ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಪ್ರಸ್ತಾವನೆ ಅಥವಾ ಸೂಚನೆ ಈವರೆಗೆ ಬಂದಿಲ್ಲ. ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಸರ್ವೆ ಕಾರ್ಯ ನಡೆಸಲು ಸಾಧ್ಯವಿಲ್ಲ. ನಾವು ಯಾವುದೇ ಅನುಮತಿಯನ್ನು ನೀಡಿಲ್ಲ ಮತ್ತು ಮುಂದೆಯೂ ಸರ್ವೆಗೆ ಅವಕಾಶ ನೀಡುವುದಿಲ್ಲ” ಎಂದು ಖಡಕ್‌ವಾಗಿ ಹೇಳಿದರು.

ಇದನ್ನೂ ಓದಿ:  ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ಇನ್ನಿಲ್ಲ

ವ್ಯಾಪಕ ವಿರೋಧದ ಹಿನ್ನೆಲೆ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯಲ್ಲಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ತಿರುವು ಮಾಡುವ ಯೋಜನೆಗೆ ಸ್ಥಳೀಯರು, ಪರಿಸರವಾದಿಗಳು ಮತ್ತು ಜಿಲ್ಲೆಯ ವಿವಿಧ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಬೃಹತ್ ವಿರೋಧಿ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ನದಿ ಜೋಡಣೆ ಯೋಜನೆಯಿಂದ ಉಂಟಾಗುವ ಪರಿಸರ ಹಾನಿ, ಅರಣ್ಯ ನಾಶ ಮತ್ತು ಸ್ಥಳೀಯರ ಬದುಕಿನ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಲಾಗಿತ್ತು.

DPR ಬಗ್ಗೆ ಗೊಂದಲ: ಈ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಯೋಜನೆಗೆ ಸಂಬಂಧಿಸಿದಂತೆ ಡಿ.ಪಿ.ಆರ್ (Detailed Project Report) ಸಿದ್ಧಪಡಿಸಲು ಸೂಚನೆ ನೀಡಿ ಸಹಿ ಹಾಕಿರುವುದಾಗಿ ಹೇಳಿಕೆ ನೀಡಿದ್ದರು. ಇದರಿಂದ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿತ್ತು.

ಇದನ್ನೂ ಓದಿ:  ಉದ್ಯೋಗ ಹುಡುಕುವ ಮನಸ್ಥಿತಿಯಿಂದ ಉದ್ಯೋಗ ಸೃಷ್ಟಿಸುವತ್ತ ಭಾರತ

ಆದರೆ ಈ ಕುರಿತು ಪ್ರತಿಕ್ರಿಯಿಸಿದ ಸಿಸಿಎಫ್ ಟಿ. ಹೀರಾಲಾಲ್, “ರಾಜ್ಯ ಸರ್ಕಾರ ಡಿ.ಪಿ.ಆರ್‌ಗೆ ಸಹಿ ಹಾಕಿರಬಹುದು. ಆದರೆ ಅರಣ್ಯ ಇಲಾಖೆಗೆ ಸರ್ವೆ ಕಾರ್ಯ ನಡೆಸಲು ಯಾವುದೇ ಪ್ರಸ್ತಾವನೆ ಬಂದಿಲ್ಲ. ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ಈ ರೀತಿಯ ಯೋಜನೆಗಳು ಮುಂದುವರಿಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಅರಣ್ಯ ಇಲಾಖೆಯ ಮುಂದಿರುವ ಇತರ ಪ್ರಮುಖ ಯೋಜನೆಗಳು: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಅರಣ್ಯ ಇಲಾಖೆಯ ಮುಂದೆ ಹೊನ್ನಾವರ ತಾಲೂಕಿನಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ದೂದ್ ಸಾಗರದಿಂದ ಕ್ಯಾಸಲ್ ರಾಕ್‌ವರೆಗೆ 9.25 ಹೆಕ್ಟರ್ ಅರಣ್ಯ ಭೂಮಿಯಲ್ಲಿ ರೈಲ್ವೆ ಡಬಲಿಂಗ್ ಯೋಜನೆ, ಸಂಬಂಧಿಸಿದ ಪ್ರಸ್ತಾವನೆಗಳು ಇರುವುದಾಗಿ ತಿಳಿಸಿದರು. ಈ ಯೋಜನೆಗಳು ಮುಂದಿನ ಹಂತಕ್ಕೆ ಸಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಅಧಿಕಾರಿಗಳ ಉಪಸ್ಥಿತಿ: ಈ ಸಂದರ್ಭದಲ್ಲಿ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಕೆ. ಉಪಸ್ಥಿತರಿದ್ದರು.