Home ನಮ್ಮ ಜಿಲ್ಲೆ ಮೈಸೂರು ಚಾಮರಾಜ ವಿಧಾನಸಭಾ ಕ್ಷೇತ್ರ ನಂದು: ಸಿಂಹ ಗುಡುಗು

ಚಾಮರಾಜ ವಿಧಾನಸಭಾ ಕ್ಷೇತ್ರ ನಂದು: ಸಿಂಹ ಗುಡುಗು

0
5

‘ಸರ್ಕಾರ ಬೀಳಲ್ಲ, ಆದರೆ ಕುರ್ಚಿ ಬದಲಾಗಬಹುದು’: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಘೋಷಣೆ

ಮೈಸೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಸೆ ಹೊಂದಿದ್ದೇನೆ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಚಾಮರಾಜ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಪ್ರತಾಪ್ ಸಿಂಹ ಆಸಕ್ತಿ ಹೊಂದಿದ್ದಾರೆ ಎಂಬ ಸುದ್ದಿಗಳಿಗೆ ಅವರೇ ಅಧಿಕೃತ ದೃಢೀಕರಣ ನೀಡಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, “ನಾನು ಅಭ್ಯರ್ಥಿ ಅಲ್ಲ, ಟಿಕೆಟ್ ಆಕಾಂಕ್ಷಿ. ಅಭ್ಯರ್ಥಿಗೂ ಆಕಾಂಕ್ಷಿಗೂ ಸಾಕಷ್ಟು ವ್ಯತ್ಯಾಸ ಇದೆ. ಆ ವ್ಯತ್ಯಾಸ ಗೊತ್ತಿಲ್ಲದೆ ಕೆಲವರು ಮಾತನಾಡುತ್ತಿದ್ದಾರೆ. ಅಭ್ಯರ್ಥಿ ಯಾರು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ

‘ಪಕ್ಷ ತೀರ್ಮಾನವೇ ಅಂತಿಮ’: ಚಾಮರಾಜ ಕ್ಷೇತ್ರದ ಟಿಕೆಟ್ ಕುರಿತು ಮಾತನಾಡಿದ ಅವರು, “ನಾನು ವಾಸು ಎಚ್.ಎಸ್. ಹಾಗೂ ಶಂಕರಲಿಂಗೇಗೌಡ ಅವರು ನಡೆದ ಹಾದಿಯಲ್ಲೇ ನಡೆಯುತ್ತೇನೆ. ಮುಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಚಾಮರಾಜ ಕ್ಷೇತ್ರದ ಜನ ವಿದ್ಯಾವಂತ ಮತ್ತು ಸಮರ್ಥ ಪ್ರತಿನಿಧಿಯನ್ನು ಬಯಸುತ್ತಿದ್ದಾರೆ” ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ: ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದರು. “ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸತ್ತಿದೆ. ಆಡಳಿತದ ಹೆಣವನ್ನು ಸಿಎಂ ಮತ್ತು ಡಿಸಿಎಂ ಮುಂದೆ ಹಿಂದೆ ಹೊತ್ತಿದ್ದಾರೆ” ಎಂದು ಕಿಡಿಕಾರಿದರು.

ಇದನ್ನೂ ಓದಿ:  ಅಂಕಣ ಬರಹ: ಗನ್ ಸಂಸ್ಕೃತಿ ಅಟ್ಟಹಾಸದಲ್ಲಿ ಬಳ್ಳಾರಿಗೆಲ್ಲಿದೆ ನೆಮ್ಮದಿ?

‘ಸರ್ಕಾರ ಬೀಳಲ್ಲ, ಆದರೆ ಕುರ್ಚಿ ಬದಲಾಗಬಹುದು’: “ಸಿದ್ದರಾಮಯ್ಯ ಬಹಳ ಬೇಗ ಜನರ ಮನಸ್ಸಿನಿಂದ ದೂರ ಆಗುತ್ತಾರೆ. ಡಿಕೆ ಶಿವಕುಮಾರ್ ಜೊತೆ ಪೈಪೋಟಿ ಮಾಡಿ ಇನ್ನಷ್ಟು ದಿನ ಸ್ಥಾನ ಉಳಿಸಿಕೊಳ್ಳಬಹುದು. ಆದರೆ ಅದರಿಂದ ಯಾವುದೇ ಪ್ರಯೋಜನ ಇಲ್ಲ” ಎಂದು ಹೇಳಿದರು. ಇದೇ ವೇಳೆ, “ಈ ಸರ್ಕಾರ ಜನ ಮಾಡಿದ ತಪ್ಪಿನಿಂದ ಅಧಿಕಾರಕ್ಕೆ ಬಂದಿದೆ. ಇನ್ನೂ ಎರಡೂವರೆ ವರ್ಷ ಈ ಆಡಳಿತವನ್ನು ಜನ ಸಹಿಸಿಕೊಳ್ಳಬೇಕಿದೆ. ಸರ್ಕಾರ ಬೀಳುವುದಿಲ್ಲ, ಆದರೆ ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು” ಎಂದು ರಾಜಕೀಯ ಭವಿಷ್ಯವನ್ನೂ ವಿಶ್ಲೇಷಿಸಿದರು.

ಚಾಮರಾಜ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿಕೆ: ಪ್ರತಾಪ್ ಸಿಂಹ ಅವರ ಈ ಘೋಷಣೆಯೊಂದಿಗೆ ಚಾಮರಾಜ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಬಿಜೆಪಿ ವಲಯದಲ್ಲಿ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯ ಇದ್ದರೂ, ಈಗಾಗಲೇ ಟಿಕೆಟ್ ಆಕಾಂಕ್ಷಿಗಳ ಚಲನವಲನ ಆರಂಭವಾಗಿದೆ.