Home ನಮ್ಮ ಜಿಲ್ಲೆ ರಾಯಚೂರು ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ

ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ

0
48

ರಾಜ್ಯಾದ್ಯಂತ ಭಕ್ತರಲ್ಲಿ ಶೋಕದ ಅಲೆ

ರಾಯಚೂರು: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಸಮೀಪ ಇರುವ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮಾನಂದ ಸ್ವಾಮೀಜಿ (49) ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ದೈವಾಧೀನರಾಗಿದ್ದಾರೆ.

ಮಂಗಳವಾರ ಮುಂಜಾನೆ ಸುಮಾರು 3.40ರ ವೇಳೆಗೆ ಸ್ವಾಮೀಜಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಲಿಂಗಸೂಗೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಅವರು ವಿಧಿವಶರಾದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:  ಮೈಲಾಪುರದ ಮಲ್ಲಯ್ಯನ ಜಾತ್ರೆಗೆ ಅದ್ಧೂರಿ ಚಾಲನೆ

ಧಾರ್ಮಿಕ – ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಸ್ವಾಮೀಜಿ: ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಬಳಿಯಿರುವ ಕಾಗಿನೆಲೆ ಕನಕ ಗುರುಪೀಠದ ಮೂಲಕ ಸಿದ್ದರಾಮಾನಂದ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಹಾಗೂ ಮಾನವೀಯ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಾಲಾ ಮಕ್ಕಳಿಗೆ ಉಚಿತ ದಾಸೋಹ, ಕನಕ ಗುರುಪೀಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳ ಆಯೋಜನೆ ಹೀಗೆ ಅನೇಕ ಜನಪರ ಕಾರ್ಯಗಳಿಂದ ಅವರು ಜನಮನ ಗೆದ್ದಿದ್ದರು.

ಹಾಲುಮತ ಉತ್ಸವಕ್ಕೆ ಸ್ವಾಮೀಜಿಗಳ ನೇತೃತ್ವ: ಇತ್ತೀಚೆಗೆ ಜನವರಿ 12, 13 ಮತ್ತು 14ರಂದು ನಡೆದ ಹಾಲುಮತ ಉತ್ಸವ ಕಾರ್ಯಕ್ರಮಗಳನ್ನು ಸಿದ್ದರಾಮಾನಂದ ಸ್ವಾಮೀಜಿಗಳು ಸ್ವತಃ ನೇತೃತ್ವ ವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಕಳೆದ 2023 ಮತ್ತು 2024ರಲ್ಲಿ ಇದೇ ಮಠದ ಉತ್ಸವಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು.

ಇದನ್ನೂ ಓದಿ:  ಆತ್ಮ ಜಾಗೃತಿಯ ಪರ್ವ ಸಂಕ್ರಾಂತಿ ಹಬ್ಬ  ವಿಡಿಯೋ ನೋಡಿ: ಮಕರ ಸಂಕ್ರಾತಿ ಎಳ್ಳು ಬೆಲ್ಲ ವಿಶೇಷತೆ

ರಾಜಕೀಯ ಹಾಗೂ ಸಾಮಾಜಿಕ ವಲಯದೊಂದಿಗೆ ಆತ್ಮೀಯ ಸಂಪರ್ಕ: ಸಿದ್ದರಾಮಾನಂದ ಸ್ವಾಮೀಜಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಹಲವು ಗಣ್ಯರೊಂದಿಗೆ ಆತ್ಮೀಯ ಸಂಪರ್ಕ ಇತ್ತು. ಅವರ ಅಕಾಲಿಕ ನಿಧನದ ಸುದ್ದಿ ಕೇಳುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂತಾಪ ಸೂಚನೆಗಳು ಹರಿದುಬರುತ್ತಿವೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ, “ಅಗಲಿದ ಕಾಗಿನೆಲೆ ಕನಕ ಪೀಠದ ಸ್ವಾಮೀಜಿಗೆ ನಮನ. ದೇವದುರ್ಗ ಬಳಿಯ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಅವರು ವಿಧಿವಶರಾಗಿರುವುದು ಅತ್ಯಂತ ದುಃಖಕರ. ಜನಪರ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಸ್ವಾಮೀಜಿಗಳು ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಭಕ್ತರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ” ಎಂದು ತಿಳಿಸಿದ್ದಾರೆ.