ಆತಂಕ, ದುಗುಡ, ಭಯಮುಕ್ತ ಬದುಕು ನಮಗೆಂದು…? ಬಳ್ಳಾರಿಯ ಜನತೆಯ ಈ ಪ್ರಶ್ನೆಗೆ ಉತ್ತರ ಹಾಗೂ ಪರಿಹಾರ ಸದ್ಯಕ್ಕಂತೂ ದೊರೆಯದು. ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರದಿಂದ ಯಾವ ಭರವಸೆ, ಅಥವಾ, ಆಶಾದಾಯಕ ನಿರೀಕ್ಷೆಯನ್ನು ಜನರಂತೂ ಹೊಂದಿಲ್ಲ.
ಹೊಸ ವರ್ಷದ ಆರಂಭದ ದಿನದಿಂದ ಬಳ್ಳಾರಿ ಕೊತಕೊತ ಕುದಿಯುತ್ತಿದೆ. ಓರ್ವ ವ್ಯಕ್ತಿ ಗುಂಡಿಗೆ ಬಲಿಯಾಗಿದ್ದರೆ, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಹಲವರು ಜೈಲು ಸೇರಿದ್ದಾರೆ. ಈ ದ್ವೇಷ, ಈರ್ಷ್ಯೆ, ಪ್ರತಿಷ್ಠೆ, ಠೇಂಕಾರಗಳಿಗೆ ಕಾರಣೀಭೂತರಾಗಿ ಮೆರೆದವರು ಬಿಂದಾಸ್ ಆಗಿ ನಗರದಲ್ಲಿ ಇನ್ನಷ್ಟು ಕಿಚ್ಚು ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮೊನ್ನೆ ನಡೆದ ಫ್ಲೆಕ್ಸ್ ಕಿತ್ತೆಸೆದ ಪ್ರಕರಣ, ಪೂರ್ವನಿಯೋಜಿತವೋ ಅಥವಾ ಆಕಸ್ಮಿಕವೋ, ದ್ವೇಷ- ಅಸೂಯೆ ರಾಜಕಾರಣದ ಪರಾಕಾಷ್ಠೆಯೋ ಎಂಬುದು ವಿಚಾರಣೆಯಿಂದ ಸಾಬೀತಾಗಬೇಕಿದೆ. ಆದರೆ ಮುನಿ ವಾಲ್ಮೀಕಿ ಸಮಾಜ ಬಳ್ಳಾರಿ ನಗರ- ಗ್ರಾಮೀಣ ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿದೆ.
ಹಾಗಾಗಿಯೆ ಗಣಿ ಧಣಿಗಳು, ರೆಡ್ಡಿ-ಲಾಡ್‌ರು ವಾಲ್ಮೀಕಿ ಸಮಾಜದ ಕೆಲ ಮುಖಂಡರನ್ನು ತಮ್ಮ ಪಕ್ಕದಲ್ಲಿ ಮುಖವಾಡವನ್ನಾಗಿಸಿಕೊಂಡಿದ್ದಾರೆ. ಶ್ರೀರಾಮುಲು ರೆಡ್ಡಿ ಜೊತೆ ಗುರುತಿಸಿಕೊಂಡಿದ್ದು ಹಾಗೂ ಅವರನ್ನು ಹಿಡಿದಿಟ್ಟುಕೊಂಡಿದ್ದೂ ಅದೇ ಕಾರಣಕ್ಕೆ.
ಬಳ್ಳಾರಿ ಮೊದಲು ಹೀಗಿರಲಿಲ್ಲ. ಎಷ್ಟು ಪ್ರಬುದ್ಧ ರಾಜಕಾರಣಿಗಳಿದ್ದರು ಆಗ? ಎಂತಹ ಪ್ರಶಾಂತತೆ ಮೆರೆದ ಜಿಲ್ಲೆ ಇದಾಗಿತ್ತು. ರಾಜ್ಯದ ಆರ್ಥಿಕ ಪರಿಣಿತ ಎಂದೇ ಪ್ರಸಿದ್ಧರಾಗಿರುವ ಎಂ.ವೈ. ಘೋರ್ಪಡೆ ನಿರಂತರವಾಗಿ ಜಿಲ್ಲೆಯನ್ನು ಕಟ್ಟಿ ಬೆಳೆಸಿದ್ದವರು. ಗ್ರಾಮೀಣಾಭಿವೃದ್ಧಿ ಸಚಿವರಾಗಿರಲಿ, ಕಂದಾಯ ಸಚಿವರಾಗಿರಲಿ, ಅರ್ಥ ಮಂತ್ರಿಯಾಗಿರಲಿ ಒಂದು ಕಪ್ಪು ಚುಕ್ಕೆ ಬರದಂತೆ ಆಡಳಿತ ನಡೆಸಿದವರು. ಅವರದೇ ಗರಡಿಯಲ್ಲಿ ಅಲ್ಲದಿದ್ದರೂ, ಸ್ವಂತ ಬಲದ ಮೇಲೆ ಜನಬೆಂಬಲ ಪಡೆದ ಎಂ.ಪಿ. ಪ್ರಕಾಶ, ಬಳ್ಳಾರಿ ಹಾಗೂ ರಾಜ್ಯದ ಜನ ಸದಾ ನೆನಪಿಟ್ಟುಕೊಳ್ಳುವಂತಹ ಸಜ್ಜನ ರಾಜಕಾರಣಿ.
ಈಗ ಪರಿಸ್ಥಿತಿ ಹೇಗಿದೆ ಎಂದರೆ ಬಳ್ಳಾರಿ ನಗರಸಭೆಯಲ್ಲಿ ಪ್ರತಿನಿಧಿಸುತ್ತಿರುವ ಬಹುತೇಕ ಸದಸ್ಯರು ಗೂಂಡಾಗರ್ದಿ, ರೌಡಿಗಿರಿ, ಸಾಮಾಜಿಕ ಸ್ವಾಸ್ಥ್ಯ ಕೆಡೆಸಿದ ಆರೋಪಗಳಲ್ಲಿ ಸಿಲುಕಿದವರು. ಇಡೀ ಪ್ರದೇಶದ ರಾಜಕಾರಣ ಮತ್ತು ಮತದಾರರನ್ನು ಮೊದಲು ಭ್ರಷ್ಟರನ್ನಾಗಿಸಿದ್ದು ಇದೇ ಬಳ್ಳಾರಿ. ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣ, ಶಾಸಕರ ಖರೀದಿ, ಶೂಟ್‌ಔಟ್, ಬಹಿರಂಗ ಸೆಣಸಾಟ, ಹಣದ ಥೈಲಿ ಎಲ್ಲವೂ ಉದಯಿಸಿದ್ದು ಇದೇ ಬಳ್ಳಾರಿಯಿಂದಲೇ.
ಇಲ್ಲಿನ ರಾಜಕಾರಣದ ಕೊಡುಗೆಗಳಿವು! ಕಪ್ಪು ಮಣ್ಣಿನ ಧೂಳಿನಲ್ಲಿ ಜನರನ್ನು, ಯುವಕರನ್ನು ದಿಕ್ಕು ತಪ್ಪಿಸಿ ಹಣದ ರುಚಿ ತೋರಿಸಿ ದುಡಿಮೆ, ದುಡಿತದ ಹಕ್ಕನ್ನು ಹೊಸಕಿ ಹಾಕಿರುವುದು ಬಳ್ಳಾರಿ. ನಿತ್ಯ ದುಡಿದರೆ ಅನ್ನ ಎನ್ನುವ ಸ್ಥಿತಿಯಿದ್ದ ಬಳ್ಳಾರಿಯ ಜನತೆಗೆ, ದುಡಿಯದೆಯೂ ಗರಿಗರಿ ನೋಟುಗಳು ನಿತ್ಯವೂ ಸಿಗುವಂತಾದಾಗ; ದುಷ್ಚಟಗಳಿಗೆ ಮುಕ್ತ ಆಹ್ವಾನ ನೀಡಿದಾಗ; ರೈತರ ಭೂಮಿಯನ್ನು ಹೆಚ್ಚು ಬೆಲೆಗೆ ಖರೀದಿಸಿ ಅವರನ್ನು ಭಿಕಾರಿಯನ್ನಾಗಿ ಮಾಡಿದಾಗ; ಧಣಿ ಸಂಸ್ಕೃತಿ, ಹಣದ ದುರಹಂಕಾರ ಎಲ್ಲವೂ ಮೇಳೈಸಿದಾಗ ಹೇಗಾದೀತು ಎನ್ನುವುದಕ್ಕೆ ದೇಶದಲ್ಲಿ ಬಹುಶಃ ಬಳ್ಳಾರಿ ಅತ್ಯುತ್ತಮ ಉದಾಹರಣೆಯಾದೀತು!
ನಿಜಕ್ಕೂ ಧನ್ಯವಾದ ಹೇಳಬೇಕು. ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ, ನ್ಯಾಯವಾದಿ ಪ್ರಶಾಂತ್ ಭೂಷಣ್, ಲೋಕಾಯುಕ್ತಕ್ಕೆ… ಒಂದು ಹಂತದಲ್ಲಿ ವಿಧಾನಸಭೆಯಲ್ಲಿಯೇ ತೋಳು ತಟ್ಟಿ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯನವರಿಗೇ ಕೂಡ.
ನಿತ್ಯ ಬಳ್ಳಾರಿಯಲ್ಲಿ ಹಾರಾಡುತ್ತಿದ್ದ ಗಣಿ ಧಣಿಗಳ ಹೆಲಿಕಾಪ್ಟರ್ ಸ್ಥಗಿತಗೊಂಡಿವೆ. ಊಟಕ್ಕೆ, ತಿಂಡಿಗೆ, ಪಾರ್ಟಿಗೆ ಬೆಂಗಳೂರು- ಹೈದರಾಬಾದ್‌ಗಳಿಗೆ ಹಾರಾಡುತ್ತ ಓಡಾಡುತ್ತಿರುವವರು ಕಳೆದ ಐದು ವರ್ಷದಲ್ಲಿ ಎಲ್ಲವೂ ಸ್ತಬ್ಧವಾದವು. ಬಳ್ಳಾರಿಯ ಈ ರಾಜಕಾರಣಿ ಕುಟುಂಬಗಳ ಒಡಕು, ವೈಮನಸ್ಸು ಎಲ್ಲವೂ ಕೂಡ ಎಷ್ಟೋ ದಿನಗಳ ಕಾಲ ಅಲ್ಪ ನೆಮ್ಮದಿಯನ್ನು ತಂದಿದ್ದವು.
ಈಗ ಮತ್ತೆ ಶುರುವಾಯಿತು. ವಾಲ್ಮೀಕಿ ಫ್ಲೆಕ್ಸ್ ಹಗರಣ ಪ್ರತಿಷ್ಠೆ ಎಂದು ಮೇಲ್ಮೋಟಕ್ಕೆ ಅನಿಸಿದರೂ ಒಳಸುಳಿ ಬೇರೇಯೇ ಇದೆ.ಹಾಗೇ, ಈ ಪ್ರಕರಣ ಬಳ್ಳಾರಿಯ ಅನೇಕ ಹೊಸ ಮುಖಗಳನ್ನು ಬಯಲು ಮಾಡಿತು.
ಮೊದಲನೆಯದ್ದು ಗನ್ ಸಂಸ್ಕೃತಿ. ಸುಮಾರು ನೂರ ಐವತ್ತಕ್ಕೂ ಅಧಿಕ ಲೀಡರ್‌ಗಳು, ಶಾಸಕರು, ಮಂತ್ರಿಗಳವರೆಗೆ ಖಾಸಗಿ ಗನ್‌ಮನ್‌ಗಳು!. ಅವರ ಕೈಯಲ್ಲಿ ಗನ್. ಪಂಜಾಬ್, ರ‍್ಯಾಣಾ, ಹೈದರಾಬಾದ್, ಮುಂಬೈ, ಉತ್ತರ ಪ್ರದೇಶಗಳಿಂದ ಬಂದವರು. ಮರಿಪುಡಾರಿ ಅಕ್ಕಪಕ್ಕದಲ್ಲಿ ಕನಿಷ್ಟ ಇಬ್ಬರು ಮೂವರು ಸಫಾರಿ ಸೂಟ್‌ಧಾರಿ ಗನ್‌ಮನ್‌ಗಳನ್ನು ಹೊಂದಿರುವ ದೃಶ್ಯವೀಗ. ಕೋಟ್ಯಂತರ ಬೆಲೆ ಬಾಳುವ ಕಾರು, ಕುತ್ತಿಗೆ- ಕೈ- ಮೈ ತುಂಬ ಬಂಗಾರ, ಎದೆಯುಬ್ಬಿಸಿ ನಡೆಯುವ ಠೇಂಕಾರ- ದರ್ಪ ಎಲ್ಲವೂ ಮೊನ್ನೆಯ ಘಟನೆಯಿಂದ ಅನಾವರಣಗೊಂಡವು.
ಯಾರು ಈ ಗನ್‌ಮನ್‌ಗಳ ನೇಮಕಕ್ಕೆ ಪರವಾನಗಿ ನೀಡಿದವರು? ಯಾರು ಅಷ್ಟೆಲ್ಲ ಮಂದಿಗೆ ಬಂದೂಕು ಪರವಾನಗಿ ಕೊಟ್ಟವರು? ಬಳ್ಳಾರಿಯಲ್ಲಿ ಭಯಮುಕ್ತ ವಾತಾವರಣ ಸೃಷ್ಟಿಯಾಗಬೇಕಿದ್ದರೆ ಸರ್ಕಾರ ಮೊದಲು ಈ ಗನ್‌ಮನ್ ಸಂಸ್ಕೃತಿಯನ್ನು ಬಗ್ಗು ಬಡೆಯಬೇಕು.
ಇಪ್ಪತ್ತು ವರ್ಷಗಳ ಹಿಂದೆ ಇದೇ ಬಳ್ಳಾರಿಯಲ್ಲಿ ಶೂಟ್‌ಔಟ್ ನಡೆದಿತ್ತು. ಆಗ ತಾವು ಶೂಟ್‌ಔಟ್ ಮಾಡಿ ಆರೋಪಿಯ ಅವರತ್ತ ಬೊಟ್ಟು ಮಾಡಿದ್ದರು. ಈಗ ಅವರು ಪ್ರತಿತಂತ್ರ ಮಾಡಿ, ಅವರಂತೆಯೇ ನಡೆದುಕೊಂಡು, ಈಗ ಇವರತ್ತ ಬೊಟ್ಟು ಮಾಡುತ್ತಿದ್ದಾರೆ! ಈ ತಂತ್ರ ಪ್ರತಿತಂತ್ರ ರಾಜಕಾರಣದ ಮಜಲು ಮೊನ್ನೆಯ ಘಟನೆಯಿಂದ ಬಯಲಾಯಿತು.
ಮೂರನೆಯದ್ದು `ಬಳ್ಳಾರಿ ಯಾರದ್ದು’ ಎಂಬ ಪ್ರಭುತ್ವ ಸ್ಥಾಪನೆಯ ಹುನ್ನಾರ. ನಾಲ್ಕನೆಯದ್ದು ಮಾದಕ ದ್ರವ್ಯಗಳ ಬಟಾಬಯಲು. ಇಡೀ ಬಳ್ಳಾರಿ ಮಾದಕ ದ್ರವ್ಯಗಳು, ಮಟಕಾ- ಜೂಜು ಅಂಗಡಿಗಳು, ಹಫ್ತಾ ವಸೂಲಿಯ ಅಡ್ಡೆಗಳಿಂದ ತುಂಬಿ ಹೋಗಿದೆ. ಐದನೆಯ ಕಾರಣ, ಸರ್ಕಾರಿ ಅಧಿಕಾರಿಗಳ ಮೇಲಿನ ಹಿಡಿತ. ಮೊನ್ನೆ ನಡೆದ ಶೂಟ್‌ಔಟ್‌ಗೆ ಪೊಲೀಸ್ ವೈಫಲ್ಯ ಕಾರಣ ಎಂದು ಸ್ವತಃ ಐಜಿ ವರದಿ ಒಪ್ಪಿಸಿದ್ದಾರೆ. ಅಲ್ಲಿರುವ ಪೊಲೀಸ್ ಅಧಿಕಾರಿಗಳೆಲ್ಲ ರಾಜಕಾರಣಿಗಳ ಸಂಬಂಧಿಕರು. ಅಥವಾ ಲಕ್ಷ ಲಕ್ಷ ಕೊಟ್ಟು ಬಂದು ಆಯಕಟ್ಟಿನ ಸ್ಥಾನದಲ್ಲಿ ಕೂತಿರುವವರು. ಅಮಾಯಕ ಎಸ್‌ಪಿ ಘಟನೆಗೆ ಬಲಿಪಶುವಾದರು ಅಷ್ಟೇ.
ಅದೇ ಘಟನಾವಳಿಗಳ ಕೇಂದ್ರಬಿಂದು ಡಿವೈಎಸ್‌ಪಿ ಸೇರಿ ಇತರರು ಸುರಕ್ಷಿತವಾಗಿದ್ದಾರೆ. ಈ ನಡುವೆ ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭಾರೀ ಅಕ್ರಮ, ಹಣದ ಥೈಲಿಯ ಓಡಾಟ ನಡೆಸಿದ್ದು ಈಗ ಬಯಲಾಗುತ್ತಿದೆ.
ಈ ಎಲ್ಲದರ ಮಧ್ಯೆ ಬಳ್ಳಾರಿಯನ್ನು ನೆಮ್ಮದಿಯಿಂದ ಹಾಗೂ ಸಹಜ ಸ್ಥಿತಿಯತ್ತ ಒಯ್ಯಬೇಕಿದ್ದರೆ, ಮೊದಲು ಪೊಲೀಸ್ ಇಲಾಖೆ ಸುಮೊಟೊ ದಾಖಲಿಸಿದ ಆರೋಪಿಗಳನ್ನು ಜೈಲಿಗಟ್ಟಬೇಕು. ಗನ್ ಸಂಸ್ಕೃತಿಯನ್ನು ಮೂಲದಿಂದ ಹೊಸಕಿ ಹಾಕಬೇಕು. ದ್ವೇಷ ಅಸೂಯೆ, ಹಣದ ಥೈಲಿ ರಾಜಕಾರಣ ಮುಕ್ತಗೊಳಿಸುವ ಜಾಗೃತ ಜನಸಮುದಾಯವನ್ನು ನಿರ್ಮಾಣ ಮಾಡಬೇಕು. ಜನ ಮನಸ್ಸು ಮಾಡಿದರೆ ಹೇಗೆಲ್ಲ ಪರಿವರ್ತನೆ ತರುತ್ತಾರೆ ಎಂಬುದಕ್ಕೆ ಬಳ್ಳಾರಿಯಲ್ಲೇ ಸಾಕ್ಷಿ ದೊರೆಯುತ್ತದೆ. ಮೆರೆದವರನ್ನು ಈ ಹಿಂದೆ ಅಲ್ಲಿಯ ಜನ ಮಣ್ಣು ಮುಕ್ಕಿಸಿರುವುದು ಕಳೆದ ವಿಧಾನಸಭೆ- ಲೋಕಸಭೆ ಫಲಿತಾಂಶವೇ ನಿದರ್ಶನ.
ಅಭಿವೃದ್ಧಿಯ ನೈಜ ಅನುಷ್ಠಾನ ಆಗಬೇಕು. ಯೋಜನೆಗಳಿಗೆ ಸರ್ಕಾರ ಹಣ ನೀಡಿದರೆ ಶೇ 25ರಷ್ಟೂ ಬಳಕೆಯಾಗುತ್ತಿಲ್ಲ ಎಂದು ಸ್ವತಃ ಸರ್ಕಾರಿ ಅಧಿಕಾರಿಗಳೇ ಹೇಳುತ್ತಾರೆ. ಅಲ್ಲಿ ನಡೆದಿರುವ ಅಕ್ರಮಗಳ ತನಿಖೆ ಆಗಲೇಬೇಕಿದೆ. ಬೋವಿ, ವಾಲ್ಮೀಕಿ ನಿಗಮದ ಹಣ ದುರುಪಯೋಗವೇ ಇದಕ್ಕೆ ಉದಾಹರಣೆ!.
ಕಳೆದ ವರ್ಷ ಬಳ್ಳಾರಿಯೊಂದರಲ್ಲೇ ದೋಷಪೂರಿತ `ರಿಂರ‍್ಸ್ ಲ್ಯಾಕ್ಟೇಟ್’ (ಆರ್‌ಎಲ್) ಐವಿ ದ್ರಾವಣ ಬಳಸಿದ ಪರಿಣಾಮ ಏಳು ಬಾಣಂತಿಯರು ಮಗು ಹೆತ್ತು ಸಾವನ್ನಪ್ಪಿದರು. ಕಳೆದ 1300 ದಿನಗಳಿಂದ ಕುಡಿತಿನಿ ವಿಭಾಗದ ರೈತರು ಯೋಗ್ಯ ಪರಿಹಾರ, ಪುನರ್ವಸತಿಗೆ ಒತ್ತಾಯಿಸಿ ಧರಣಿ ಮಾಡುತ್ತಿದ್ದಾರೆ. ಬ್ರಹ್ಮಿಣಿ ಮತ್ತು ಮಿತ್ತಲ್ ಕಂಪನಿಗಾಗಿ ಕಡಿಮೆ ಮೊತ್ತಕ್ಕೆ ಭೂಮಿ ಸ್ವಾಧೀನ ಪಡೆದು, ಅದನ್ನು ಕೊಟ್ಯಂತರ ರೂ. ಗೆ ಜಿಂದಾಲ್ ಕಂಪನಿಗೆ ಮಾರಿದ ಪ್ರಕರಣ ರಾಜಾರೋಷ ವಂಚನೆ. ರೈತರ ಜಮೀನೂ ಹೋಯಿತು. ಸ್ಥಳೀಯರಿಗೆ ಉದ್ಯೋಗವೂ ಇಲ್ಲ. ನಡೆದದ್ದು ರಿಯಲ್ ಎಸ್ಟೇಟ್ ದಂಧೆ. ಇವ್ಯಾವುವೂ ಬಳ್ಳಾರಿಯಲ್ಲಿ ತನಿಖೆ ಇಲ್ಲ, ಮುನ್ನೆಲೆಗೆ ಬರುವುದೂ ಇಲ್ಲ.
ಆದರೆ ರಕ್ತಸಿಕ್ತ ದ್ವೇಷ ರಾಜಕಾರಣ, ಹಣದ ಥೈಲಿಗೆ ಜನ ನಲುಗಿದ್ದಾರೆ. ಇಂತಹ ಶೂಟ್‌ಔಟ್ ಪ್ರಕರಣಗಳು ಇನ್ನಷ್ಟು ಆದಾವು ಎನ್ನುವ ಭಯದಲ್ಲಿದ್ದಾರೆ. ಸರ್ಕಾರ ಬಳ್ಳಾರಿಯ ಶಾಂತಿ- ನೆಮ್ಮದಿಗೆ, ಬದುಕಿಗೆ ಏನು ಬೇಕು ಎಂಬುದಕ್ಕೆ ವ್ಯವಸ್ಥಿತ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹಿಂದಂತೂ ಆಗಿಲ್ಲ. ಈಗಿನ ಸರ್ಕಾರದಲ್ಲೂ ವಿಶ್ವಾಸವಿಲ್ಲ. ಮುಂದಿನದ್ದು ಗೊತ್ತಿಲ್ಲ. ಬಳ್ಳಾರಿಯ ಬವಣೆ, ಬೇಗುದಿ ತಪ್ಪದು ಎನಿಸುತ್ತದೆ.



















