ಕೊಳಲು ಮಾಂತ್ರಿಕ ಗೋಡಖಿಂಡಿಗೆ ರಾಷ್ಟ್ರೀಯ ಪುರಸ್ಕಾರ

0
4

ಹುಬ್ಬಳ್ಳಿ: ಗಂಗೂಬಾಯಿ ಹಾನಗಲ್​ ಸಂಗೀತ ವಿದ್ಯಾಲಯದ ವತಿಯಿಂದ ಹುಬ್ಬಳ್ಳಿಯಲ್ಲಿ ಕೊಳಲು ಮಾಂತ್ರಿಕ ಪಂಡಿತ ಪ್ರವೀಣ ಗೋಡಖಿಂಡಿ ಅವರಿಗೆ ‘ಕೃಷ್ಣಾ ಹಾನಗಲ್​ ರಾಷ್ಟ್ರೀಯ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು.

ಪದ್ಮಶ್ರೀ ಪಂಡಿತ ಎಂ. ವೆಂಕಟೇಶಕುಮಾರ ಅವರು ಪಂ. ಪ್ರವೀಣ ಗೋಡಖಿಂಡಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ. ಪ್ರವೀಣ ಗೋಡಖಿಂಡಿ, ಮಕ್ಕಳಿಗೆ ಚಿಕ್ಕವರಿದ್ದಾಗಿಂದಲೇ ಶಾಸ್ತ್ರೀಯ ಸಂಗೀತದ ರುಚಿ ಬೆಳೆಸಬೇಕು. ಶಾಸ್ತ್ರೀಯ ಸಂಗೀತ ಕಲಾವಿದರನ್ನು ಬೆಳೆಸುವ ಜತೆಗೆ ಉತ್ಕೃಷ್ಟ ಕಲಾವಿದರನ್ನು ಸಹ ಬೆಳೆಸೋಣ ಎಂದು ಸಲಹೆ ನೀಡಿದರು.

ನನಗೆ ಸಲ್ಲುತ್ತಿರುವ ಪ್ರಶಸ್ತಿಗಳು, ಗೌರವಗಳು ಸಲ್ಲಬೇಕಿರುವುದು ನನ್ನ ತಂದೆ ಪಂ. ವೆಂಕಟೇಶ ಗೋಡಖಿಂಡಿ ಅವರಿಗೆ. ಅವರು ಧಾರವಾಡದ ಮಣ್ಣಿನಿಂದ ಬಂದ ಅಪ್ರತಿಮ ಕಲಾವಿದರು. ಕೊಳಲು ನುಡಿಸುವ ಜತೆಗೆ ಹಾಡು ಸಹ ಹಾಡುತ್ತಿದ್ದರು. ಅವರಿಗೆ ವಿವಿಧ ರಾಣೆಗಳ ಅಪಾರ ಜ್ಞಾನ ಇತ್ತು ಎಂದರು.

ಇದನ್ನೂ ಓದಿ: ಲಕ್ಕುಂಡಿ ನಿಧಿಗೆ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಇತಿಹಾಸ..!

ತಂದೆಯೇ ನನಗೆ ಗುರುವಾಗಿದ್ದು ನನ್ನ ಸೌಭಾಗ್ಯ. ಅವರು ಏಕಲವ್ಯನಂತೆ ಸ್ವತಂತ್ರವಾಗಿ ಕೊಳಲು ನುಡಿಸುವುದನ್ನು ಕಲಿತರು. ಕೊಳಲಿನಲ್ಲಿ ಪಂಚಮ ರಾಗಕ್ಕೆ ಹೆಬ್ಬೆಟ್ಟಿಗೂ ಒಂದು ರಂದ್ರವನ್ನು ಸಂಶೋಧನೆ ಮಾಡಿದ್ದು ನನ್ನ ತಂದೆ. ಇದೀಗ, ಬಹುತೇಕ ಕಲಾವಿದರು ಕೊಳಲು ನುಡಿಸುವಾಗ ಹೆಬ್ಬೆಟ್ಟಿನ ರಂದ್ರವನ್ನೂ ಉಪಯೋಗಿಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರಶಸ್ತಿ ವಿತರಿಸಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂ. ಎಂ. ವೆಂಕಟೇಶ ಕುಮಾರ, ಸಂಗೀತ ವಿದ್ಯಾರ್ಥಿಗಳು ತಮ್ಮ ಗುರುಗಳಿಂದ ಕೇವಲ ಸಂಗೀತದ ಪಾಠ ಕಲಿಯಬಾರದು. ಗುರುಗಳಲ್ಲಿನ ಗುಣಗಳನ್ನು ಸಹ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಕಲಾವಿದರಾಗುವ ಜತೆಗೆ ಅತ್ಯುತ್ತಮ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕು ಎಂದರು.

Previous articleಲಕ್ಕುಂಡಿ ನಿಧಿಗೆ ವಿಜಯನಗರ ಸಾಮ್ರಾಜ್ಯದ ಸಮಕಾಲೀನ ಇತಿಹಾಸ..!