ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಮಾಡಿದೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ
ಬೆಂಗಳೂರು: ಶಿಡ್ಲಘಟ್ಟದಲ್ಲಿ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ವಿರುದ್ಧ ಕಾಂಗ್ರೆಸ್ ಮುಖಂಡನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿದೆ ಎಂದು ಅವರು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಕೈಕಟ್ಟು ಹಾಕಲ್ಪಟ್ಟಿದೆ. ಕಾಂಗ್ರೆಸ್ ಮುಖಂಡರುಗಳು ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಂತಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡನ ನಿಯಮಬಾಹಿರ ಕೃತ್ಯ ಮಾತ್ರವಲ್ಲದೆ, ಒಬ್ಬ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಮೇಲೆ ಅಸಭ್ಯವಾಗಿ ವರ್ತಿಸಿರುವುದು ಅಕ್ಷಮ್ಯ ಅಪರಾಧ” ಎಂದು ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಅನಧಿಕೃತ ಬ್ಯಾನರ್ ತೆರವು: ನಗರಸಭೆ ಪೌರಾಯುಕ್ತರಿಗೆ ಬೆದರಿಕೆ ಕರೆ…
ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಪ್ರಶ್ನೆ: ಈ ಘಟನೆಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪ್ರಶ್ನೆ ಎತ್ತಿದ ವಿಜಯೇಂದ್ರ, “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮದೇ ಪಕ್ಷದ ಈ ಮುಖಂಡನ ಗೂಂಡಾ ವರ್ತನೆಗೂ ಬಳ್ಳಾರಿಯ ಪ್ರಕರಣದಂತೆ ನಿಮ್ಮ ಮೌನ ಸಮ್ಮತಿ ಇದೆಯೇ? ಅಥವಾ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರರವರ ಕಾರ್ಯವೈಖರಿಯನ್ನೂ ಟೀಕಿಸಿದ ಅವರು, “ಗೃಹ ಸಚಿವರನ್ನಂತೂ ಕೇಳುವಂತೆಯೇ ಇಲ್ಲ. ಅವರಿಗೆ ಮಾಹಿತಿ ಇರುವುದೇ ಇಲ್ಲ. ಪೊಲೀಸ್ ಇಲಾಖೆಯ ಕೈಕಟ್ಟಿ ಹಾಕಿ, ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ?” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಖಾಸಗಿ ಕಾರ್ಯಕ್ರಮಕ್ಕೂ ರಾಜಕೀಯ ಬಣ್ಣ:ಎಂ.ಬಿ. ಪಾಟೀಲ್ ಆಕ್ರೋಶ
ಮಹಿಳಾ ಅಧಿಕಾರಿಗಳ ರಕ್ಷಣೆಗೆ ಆಗ್ರಹ: “ಅಧಿಕಾರದ ಮದದಿಂದ ಜನಸಾಮಾನ್ಯರು ಹಾಗೂ ಪ್ರಾಮಾಣಿಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವುದನ್ನು ಬಿಜೆಪಿ ಪಕ್ಷ ಸುಮ್ಮನಿರಲು ಸಾಧ್ಯವಿಲ್ಲ. ಮಹಿಳಾ ಅಧಿಕಾರಿಯ ವಿರುದ್ಧ ದಬ್ಬಾಳಿಕೆ ನಡೆಸುವ ಇಂತಹ ಅಶಿಸ್ತಿನ ನಾಯಕರ ವಿರುದ್ಧ ರಾಜ್ಯ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ವಿಜಯೇಂದ್ರ ಒತ್ತಾಯಿಸಿದರು.
ಎಚ್ಚರಿಕೆ – ಜನರೇ ತಕ್ಕ ಪಾಠ ಕಲಿಸಲಿದ್ದಾರೆ: ರಾಜ್ಯ ಸರ್ಕಾರ ಈ ವಿಚಾರದಲ್ಲಿ ಮೌನ ವಹಿಸಿದರೆ ಪರಿಣಾಮ ಗಂಭೀರವಾಗಲಿದೆ ಎಂದು ಎಚ್ಚರಿಕೆ ನೀಡಿದ ಅವರು, “ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಜನರೇ ರಸ್ತೆಗಿಳಿದು ತಕ್ಕ ಪಾಠ ಕಲಿಸಲಿದ್ದಾರೆ. ಇದು ಬಿಜೆಪಿ ಪಕ್ಷದ ಎಚ್ಚರಿಕೆ ಮಾತ್ರವಲ್ಲ, ರಾಜ್ಯದ ಜನರ ಮನೋಭಾವವೂ ಹೌದು” ಎಂದು ಹೇಳಿದ್ದಾರೆ.






















