ಚಿಕ್ಕಮಗಳೂರು: ಬಾಳೆಹೊನ್ನೂರು ಪಟ್ಟಣದ ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಅಕಾಲಿಕ ಮಳೆ ಸುರಿದಿದ್ದು, ಕಾಫಿ ಮತ್ತು ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಒಂದು ಗಂಟೆ ಕಾಲ ಗುಡುಗು – ಮಿಂಚು, ಗಾಳಿ ಸಹಿತ ಮಳೆಯಾಗಿದೆ.
ಕಾಫಿ ಕಣದಲಿ ಒಣ ಹಾಕಿದ್ದ ಕಾಫಿ ಬೀಜಗಳು ಒದ್ದೆಯಾಗಿದ್ದು ಗುಣಮಟ್ಟ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಕಾರ್ಮಿಕರ ಸಮಸ್ಯೆ ಇರುವ ಈ ದಿನಗಳಲ್ಲಿ ಮಳೆ ಬಂದ ತಕ್ಷಣ ಕಾಫಿ ರಾಶಿ ಮಾಡಲು ಸಾಧ್ಯವಾಗದೆ ಕೆಲವು ಬೆಳೆಗಾರರು ಒಣ ಹಾಕಿದ್ದ ಕಾಫಿ ಒದ್ದೆಯಾಗಿದ್ದು, ಸಂಗಮೇಶ್ವರ ಪೇಟೆ, ಕಡಬಗೆರೆ, ಖಾಂಡ್ಯ, ಬನ್ನೂರು, ಸಿ.ಕೆ ಹಲಸೂರು ಸುತ್ತಮುತ್ತ ಮಳೆಯಾಗಿದೆ.
ಮಳೆ ಇದೇ ರೀತಿ ಮುಂದುವರೆದಲ್ಲಿ ಕಾಫಿ ಗಿಡದಲ್ಲಿ ಇರುವ ಹಣ್ಣು ಕೊಯ್ಲು ಮಾಡಲು ಆಗದೆ ಹೂ ಬರುವ ಸಾಧ್ಯತೆಯಿದ್ದು, ಮುಂದಿನ ವರ್ಷದ ಫಸಲಿನಲ್ಲಿ ಕೊರತೆಯಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.









