ಸೂರ್ಯನಾರಾಯಣ ನರಗುಂದಕರ
ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದ ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಚಿನ್ನಾಭರಣಗಳು ದೊರೆತ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆಯನ್ನು ವಶಕ್ಕೆ ಪಡೆದು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿದೆ. ಆದರೆ ಪ್ರಾಚೀನ ಚಿನ್ನವನ್ನು ಸರಕಾರಕ್ಕೆ ವಾಪಸ್ ಮಾಡಿದ ಬಡ ಕುಟುಂಬ ಈಗ ಮನೆ ಕಳೆದುಕೊಂಡು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಪುರಾತತ್ವ ಇಲಾಖೆಯ ಕಾನೂನಿನಂತೆ ನಿಷೇಧಿತ ಪ್ರದೇಶದಿಂದ ಎರಡು ನೂರು ಮೀಟರ್ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಮನೆ ನಿರ್ಮಾಣ ಅಸಾಧ್ಯವಾಗಿದೆ. ಮನೆಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದ್ದರಿಂದ ಕುಟುಂಬದ ಸದಸ್ಯರು ಎಲ್ಲಿ ವಾಸಿಸಬೇಕೆಂಬ ಚಿಂತೆ ಆವರಿಸಿದೆ. ಕುಟುಂಬದ ಸದಸ್ಯರು ಸದ್ಯಕ್ಕೆ ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ಭಾರತ ಸ್ವಾಭಿಮಾನದ ಪ್ರತೀಕ ಸೋಮನಾಥ ದೇವಾಲಯ
ಏನಾಗಿತ್ತು?: ಗಂಗವ್ವ ರಿತ್ತಿ ಎಂಬುವರ ಮನೆಯ ಅಡಿಪಾಯ ತೆಗೆಯುವಾಗ ಎಂಟನೇಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಪುತ್ರ ಪ್ರಜ್ವಲ್‌ನಿಗೆ ಚಿನ್ನದಾಭರಣಗಳನ್ನು ಒಳಗೊಂಡಿರುವ ತಾಮ್ರದ ತಂಬಿಗೆ ದೊರೆತಿತ್ತು. ಈ ತಂಬಿಗೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದಾಭರಣಗಳು ದೊರೆತಿದ್ದವು. ಚಿನ್ನದಾಭರಣ ದೊರೆತ ಬಗ್ಗೆ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲರಿಗೆ ಸುದ್ದಿ ತಲುಪಿಸಿದ್ದಾರೆ.
ಸಿದ್ದು ಪಾಟೀಲ ಕೂಡಲೇ ಕಾನೂನು ಸಚಿವ ಡಾ. ಎಚ್.ಕೆ. ಪಾಟೀಲರೊಂದಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿದ್ದಾರೆ. ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಮುಂತಾದ ಅಧಿಕಾರಿಗಳು ಭೇಟಿ ನೀಡಿ ದೊರೆತ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಏನೇನು ದೊರೆತಿದೆ?: ತಂಬಿಗೆಯಲ್ಲಿ ಕೈಗಡಗ, ಕಂಠಿಹಾರ, ನೆಕ್‌ಚೈನ್, ಕಿವಿಯೋಲೆ, ವಂಕಿಯುಂಗುರ, ನಾಗಮುದ್ರೆಯ ಕಿವಿಯೋಲೆ, ಬಣ್ಣದ ಹರಳುಗಳು, ಗೆಜ್ಜೆ, ಕಡ್ಡಿ, 22 ತೂತು ಬಿಲ್ಲೆ ಹಾಗೂ ಆಭರಣಗಳು.
ಇದನ್ನೂ ಓದಿ: ವಾಯುಭಾರ ಕುಸಿತ: ಮುಂದಿನ 3 ದಿನ ಚಳಿಯ ತೀವ್ರತೆ ಹೆಚ್ಚಳ
ಮನೆ ಮಾಲಿಕಳಾದ ಗಂಗವ್ವ ರಿತ್ತಿ ಮಾತನಾಡಿ, “ನಾವು ಬಡವರು. ಮನೆ ನಿರ್ಮಿಸುವಾಗ ದೊರೆತ ಚಿನ್ನ ಸರಕಾರಕ್ಕೆ ಒಪ್ಪಿಸಿದ್ದೇವೆ. ನಮಗೆ ಈ ಮನೆ ಬಿಟ್ಟು ಬೇರೆ ಯಾವುದೇ ಮನೆಯಿಲ್ಲ. ನಮಗೆ ಮನೆ ನೀಡಬೇಕು. ನನ್ನ ಏಕೈಕ ಪುತ್ರನ ಭವಿಷ್ಯಕ್ಕೆ ಸರಕಾರ ಏನಾದರೂ ಸಹಾಯ ಮಾಡಬೇಕು” ಎಂದು ಕೇಳಿಕೊಂಡಿದ್ದಾರೆ.
ಪುರಾತತ್ವ ಇಲಾಖೆ ಅಧಿಕಾರಿ ರಮೇಶ ಈ ಕುರಿತು ಮಾತನಾಡಿ, “ಲಕ್ಕುಂಡಿಯಲ್ಲಿ ಮನೆಪಾಯ ಅಗೆಯುವಾಗ ದೊರೆತಿರುವ ಚಿನ್ನಾಭರಣಗಳು ಕುಟುಂಬದ ಸದಸ್ಯರು ಹುದುಗಿಸಿಟ್ಟಿರುವ ನಿಧಿಯಾಗಿರಬಹುದು. ದೇವಾಲಯದಲ್ಲಿ ದೊರೆತಿದ್ದಲ್ಲಿ ರಾಜವಂಶಕ್ಕೆ ಸೇರಿರಬಹುದೆಂದು ಭಾವಿಸಬಹುದಿತ್ತು. ಸಮಗ್ರ ಪರಿಶೀಲನೆ ನಂತರ ವಿಷಯ ಹೊರ ಬರಲಿದೆ” ಎಂದರು.









