
ಡಾ. ವಿಶ್ವನಾಥ ಕೋಟಿ
ಧಾರವಾಡ: ಉಪಗ್ರಹ ಉಡಾವಣೆಯಲ್ಲಿ ವಿಶ್ವದ ಗಮನ ಸೆಳೆದಿರುವ ಭಾರತ ಇದೀಗ ತನ್ನದೇ ಆದ ಅಂತರಿಕ್ಷ ನಿಲ್ದಾಣ (Indian Space Station) ಸ್ಥಾಪಿಸುವ ದಿಸೆಯಲ್ಲಿ ಶತಪ್ರಯತ್ನ ನಡೆಸುತ್ತಿದೆ. ಈ ಮಹತ್ವಾಕಾಂಕ್ಷಿ ಗುರಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹಗಲಿರುಳು ಶ್ರಮಿಸುತ್ತಿದೆ ಎಂದು ಇಸ್ರೋ ಪ್ರಾಧ್ಯಾಪಕ ಹಾಗೂ ನಿವೃತ್ತ ಇಸ್ರೋ ವಿಜ್ಞಾನಿ ಪ್ರೊ. ರಂಗನಾಥ ನವಲಗುಂದ ಅಭಿಪ್ರಾಯಪಟ್ಟರು.
ನಗರದ ವಿದ್ಯಾ ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಧಾರವಾಡಕ್ಕೆ ಆಗಮಿಸಿದ್ದ ಅವರು, ಸಂಯುಕ್ತ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು, ಪ್ರಸ್ತುತ ಸ್ಥಿತಿ ಹಾಗೂ ಭವಿಷ್ಯದ ಯೋಜನೆಗಳ ಕುರಿತು ವಿವರವಾಗಿ ಮಾತನಾಡಿದರು.
ಇದನ್ನೂ ಓದಿ: ಬಿಜೆಪಿ ಉಪಾಧ್ಯಕ್ಷ ಆತ್ಮಹತ್ಯೆಗೆ ಶರಣು
ಭಾರತೀಯ ಅಂತರಿಕ್ಷ ನಿಲ್ದಾಣದ ಕನಸು: ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಷನ್ ಹಾಗೂ ಚೀನಾದ ಟಿಯಾನ್‌ಗಾಂಗ್ ಸ್ಪೇಸ್ ಸ್ಟೇಷನ್ಗಳಂತೆ ಭಾರತಕ್ಕೂ ತನ್ನದೇ ಆದ ಅಂತರಿಕ್ಷ ನಿಲ್ದಾಣ ಇರಬೇಕೆಂಬುದು ಅಗತ್ಯವಾಗಿದೆ ಎಂದು ಅವರು ಹೇಳಿದರು. “ಗಗನಯಾನ ಯೋಜನೆ ಇಸ್ರೋದ ಭವಿಷ್ಯದ ಬಹುಮುಖ್ಯ ಗುರಿಯಾಗಿದೆ. ಒಬ್ಬ ಪುರುಷ ಅಥವಾ ಮಹಿಳೆಯನ್ನು ಅಂತರಿಕ್ಷಕ್ಕೆ ಕಳುಹಿಸುವ ಉದ್ದೇಶದೊಂದಿಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಈ ಯೋಜನೆಯಲ್ಲಿ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ಇಸ್ರೋದ ಮುಂದೆ ಇರುವ ದೊಡ್ಡ ಸವಾಲು” ಎಂದು ತಿಳಿಸಿದರು.
ಶುಕ್ರಯಾನ ಮತ್ತು ಮುಂದಿನ ಮಂಗಳಯಾನ: 2028ರಲ್ಲಿ ಮಿಷನ್ ವೀನಸ್ (ಶುಕ್ರಯಾನ) ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ ಪ್ರೊ. ನವಲಗುಂದ, “ಶುಕ್ರ ಗ್ರಹಕ್ಕೆ ತೆರಳುವುದು ಮಂಗಳಯಾನಕ್ಕಿಂತಲೂ ಹೆಚ್ಚು ಕಠಿಣ. ಅಲ್ಲಿ ಉಷ್ಣತೆ ಅತ್ಯಧಿಕವಾಗಿದ್ದು, ಪರಿಸ್ಥಿತಿಯನ್ನು ಅಧ್ಯಯನ ಮಾಡುವುದು ಸುಲಭವಲ್ಲ. ಅಲ್ಲಿಗೆ ಹೋಗಿದರೂ ಮಂಗಳಗ್ರಹದಂತೆ ಸರಳವಾಗಿ ಪರಿಶೀಲನೆ ನಡೆಸಲು ಸಾಧ್ಯವಿಲ್ಲ” ಎಂದರು. ಇದಲ್ಲದೆ, ಇನ್ನಷ್ಟು ವೈಜ್ಞಾನಿಕ ಸಲಕರಣೆಗಳೊಂದಿಗೆ ಮತ್ತೊಮ್ಮೆ ಮಂಗಳಯಾನ ನಡೆಸುವ ಅಗತ್ಯವಿದೆ ಎಂದೂ ಅವರು ಹೇಳಿದರು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಕಾಂಗ್ರೆಸ್ ಉಚ್ಚಾಟಿತ ಶಾಸಕ ಪೊಲೀಸ್ ವಶಕ್ಕೆ
ಬಾಹ್ಯಾಕಾಶ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI): ಪ್ರಸ್ತುತ ಬಹುತೇಕ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವ ಕೃತಕ ಬುದ್ಧಿಮತ್ತೆ (AI) ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ವಿವರಿಸಿದರು. ಉಪಗ್ರಹಗಳು ಭೂಮಿಯ ಹಾಗೂ ಸಮುದ್ರದ ಅಪಾರ ಪ್ರಮಾಣದ ಡೇಟಾವನ್ನು ಸಂಗ್ರಹಿಸುತ್ತಿದ್ದು, ಈ ಮಾಹಿತಿಯನ್ನು ವಿಶ್ಲೇಷಿಸಲು ಎಐ ಹಾಗೂ ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳು ಸಹಕಾರಿಯಾಗುತ್ತಿವೆ.
“ಮುಂಗಾರು, ಉಷ್ಣತೆ, ಸಾಗರ ಪ್ರವಾಹಗಳ ವೇಗ ಮುಂತಾದವುಗಳನ್ನು ಮುಂಚಿತವಾಗಿ ಅಂದಾಜಿಸಲು ಎಐ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಡೇಟಾ ಪ್ರಕ್ರಿಯೆಯನ್ನು ಉಪಗ್ರಹದಲ್ಲಿಯೇ ನಡೆಸುವ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದು, ಇದರಿಂದ ಭೂಮಿಗೆ ಕಳುಹಿಸುವ ಡೇಟಾ ಪ್ರಮಾಣ ಕಡಿಮೆಯಾಗಲಿದೆ. ವಾಸ್ತವವಾಗಿ ಎಐ ಹಲವು ವರ್ಷಗಳಿಂದಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಳಕೆಯಲ್ಲಿದೆ” ಎಂದು ಹೇಳಿದರು.
ಇದನ್ನೂ ಓದಿ: ಧಾರವಾಡದ ಜನರೆದುರು ‘ಲ್ಯಾಂಡ್ ಲಾರ್ಡ್’ ಗಾನಾಬಜಾನಾ
ಚಂದ್ರಯಾನದ ಹಿರಿಮೆ: ಚಂದ್ರಯಾನದ ಮಹತ್ವವನ್ನು ವಿವರಿಸಿದ ಅವರು, “ಇಡೀ ವಿಶ್ವದಲ್ಲಿ ಕೇವಲ ಐದು ದೇಶಗಳಿಗೆ ಮಾತ್ರ ಚಂದ್ರನನ್ನು ತಲುಪಲು ಸಾಧ್ಯವಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಯಶಸ್ವಿಯಾಗಿ ತಲುಪಿದ ದೇಶವಾಗಿರುವುದು ಭಾರತದ ಹೆಗ್ಗಳಿಕೆ. ಧ್ರುವ ಪ್ರದೇಶದಲ್ಲಿ ಆಳವಾದ ಕಂದಕಗಳು ಹಾಗೂ ಮಂಜುಗಡ್ಡೆಗಳಿರುವುದರಿಂದ ಅಲ್ಲಿನ ಸ್ಥಿತಿಗತಿಯನ್ನು ಅರಿಯುವುದು ಬಹಳ ಮುಖ್ಯ” ಎಂದು ಹೇಳಿದರು.
ಎಲ್ಲಾ ದೇಶಗಳಿಗೂ ಉಪಗ್ರಹ ಉಡಾವಣೆಯ ಸಾಮರ್ಥ್ಯ ಇರುವುದಿಲ್ಲ. ಅಪಾರ ಹಣದ ಅವಶ್ಯಕತೆಯಿಂದಾಗಿ ಯುರೋಪಿನ ಸಣ್ಣ ರಾಷ್ಟ್ರಗಳು ಸೇರಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದರು.
ಇದನ್ನೂ ಓದಿ: ಅಪಘಾತ: DYSP ವೈಷ್ಣವಿ ಅವರ ತಾಯಿ ಸೇರಿ ಇಬ್ಬರು ಸಾವು
PSLV ಉಡಾವಣೆ – ಮತ್ತೊಂದು ಮೈಲಿಗಲ್ಲು: ಜನವರಿ 12ರಂದು ಇಸ್ರೋ ಮತ್ತೊಂದು ಪಿಎಸ್‌ಎಲ್‌ವಿ ಉಡಾವಣೆ ನಡೆಸಲಿದ್ದು, ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಪ್ರೊ. ನವಲಗುಂದ ವಿಶ್ವಾಸ ವ್ಯಕ್ತಪಡಿಸಿದರು.
ಈ ಉಪಗ್ರಹವನ್ನು ಭೂಮಿಯಿಂದ 700–800 ಕಿ.ಮೀ. ಎತ್ತರದ ಪೋಲಾರ್ ಆರ್ಬಿಟ್‌ಗೆ ಸೇರಿಸಲಾಗುವುದು. ಮೂರು–ನಾಲ್ಕು ಹಂತಗಳನ್ನೊಳಗೊಂಡ ಈ ಉಡಾವಣೆಯು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.
“ಇದುವರೆಗೆ ಕೇವಲ ಎರಡು ಪಿಎಸ್‌ಎಲ್‌ವಿ ಉಡಾವಣೆಗಳು ಮಾತ್ರ ವಿಫಲವಾಗಿವೆ. ಇದರಿಂದಲೇ ಇಸ್ರೋದ ವಿಶ್ವಾಸಾರ್ಹತೆ ಸ್ಪಷ್ಟವಾಗುತ್ತದೆ. ಈ ಉಡಾವಣೆಯಿಂದ ಭಾರತದ ಬಾಹ್ಯಾಕಾಶ ಕ್ಷೇತ್ರದ ಗೌರವ ಇನ್ನಷ್ಟು ಹೆಚ್ಚಲಿದೆ” ಎಂದು ಹೇಳಿದರು.





















