ಭಾಷೆ ಕಡೆಗಣನೆಗೆ ವಿಶ್ವವಿದ್ಯಾನಿಲಯಗಳು ಹಾಗೂ ಅಧ್ಯಾಪಕರು ಕಾರಣ

0
2

ಮಂಗಳೂರು: ಭಾಷೆಯ ಮೇಲಿನ ಆಸಕ್ತಿ ಕುಗ್ಗಲು ವಿಶ್ವವಿದ್ಯಾಲಯಗಳ ಪಠ್ಯಕ್ರಮ ಮತ್ತು ಅಧ್ಯಾಪಕರ ಬೋಧನಾ ವಿಧಾನಗಳೇ ಪ್ರಮುಖ ಕಾರಣ ಎಂದು ಶತಾವಧಾನಿ ಆರ್. ಗಣೇಶ್ ಅಭಿಪ್ರಾಯಪಟ್ಟರು. ಮಂಗಳೂರು ಲಿಟ್ ಫೆಸ್ಟ್‌ನ 8ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಕಥೆ–ಕವಿತೆಗಳ ಸಾರಾಂಶಕ್ಕೆ ಮಾತ್ರ ಸೀಮಿತವಾದ ಪಾಠ ನಡೆಯುತ್ತಿದ್ದು, ಆಳವಾದ ವಿವರಣೆ ಮತ್ತು ವಿಶ್ಲೇಷಣೆ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

“ಅನ್ಯಥಾ ಭಾವಿಸಬೇಡಿ” ಎಂದು ಹೇಳಿಕೊಂಡೇ ಮಾತನಾಡಿದ ಗಣೇಶ್, “ಪಂಪ, ಡಿ.ವಿ.ಜಿ., ಕುವೆಂಪು ಅವರ ಕಾವ್ಯಗಳ ಸಾರಾಂಶ ಹೇಳಲಾಗುತ್ತದೆ. ಆದರೆ ಆ ಕೃತಿಗಳ ಆಳವಾದ ಅಧ್ಯಯನ ನಡೆಯುವುದಿಲ್ಲ. ಸಾಹಿತ್ಯವನ್ನು ಆಳವಾಗಿ ಓದಿದಾಗ ಮಾತ್ರ ಭಾಷೆಯೂ ಮೌಲ್ಯಗಳೂ ಅರಿವಿಗೆ ಬರುತ್ತವೆ” ಎಂದರು. ಮೌಲ್ಯಗಳ ಅರ್ಥವನ್ನು ವಿವರಿಸಿದ ಅವರು, “ಮೌಲ್ಯಗಳು ಎಂದರೆ ನಮ್ಮನ್ನು ನಾವು ತಿಳಿದುಕೊಳ್ಳುವುದು. ಫ್ಯಾಕ್ಟ್ಸ್ ಹೇಳಲಾಗದ ವಿಷಯಗಳನ್ನು ಮೌಲ್ಯಗಳು ಹೇಳುತ್ತವೆ” ಎಂದು ಹೇಳಿದರು.

ಇದನ್ನೂ ಓದಿ:  ‘Jana Nayagan’ ಬಿಡುಗಡೆಗೆ ಕಾನೂನು ಅಡೆತಡೆ: ಅನಿಶ್ಚತೆಯಲ್ಲಿ ದಳಪತಿ ವಿಜಯ್ ಕೊನೆಯ ಸಿನಿಮಾ

ಸರಸ್ವತಿ ರಥ ಎಳೆಯುವ ಮೂಲಕ ಲಿಟ್ ಫೆಸ್ಟ್‌ಗೆ ವಿಧ್ಯುಕ್ತ ಚಾಲನೆ: ಇದಕ್ಕೂ ಮುನ್ನ, ಹೊತ್ತಿಗೆಗಳಿಂದ ಅಲಂಕರಿಸಲಾದ ಸರಸ್ವತಿ ರಥವನ್ನು ಎಳೆಯುವ ಮೂಲಕ ಮಂಗಳೂರು ಲಿಟ್ ಫೆಸ್ಟ್‌ನ ೮ನೇ ಆವೃತ್ತಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ವೇದಿಕೆಗೆ ಅತಿಥಿಗಳು ಸರಸ್ವತಿ ರಥವನ್ನು ಎಳೆದುಕೊಂಡು ಬರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಸಾಹಿತ್ಯ ಸಮಾಜ ರೂಪಿಸುವ ಶಕ್ತಿ – ರವಿ ಎಸ್: ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ರವಿ ಎಸ್, “ಸಮಾಜವನ್ನು ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಅಪಾರ. ಓದು ಮತ್ತು ಚಿಂತನೆಯ ಮೂಲಕ ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಸಾಧ್ಯ. ಯುವಜನರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಲಿಟ್ ಫೆಸ್ಟ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:  ಹುಬ್ಬಳ್ಳಿಗೆ CID ತಂಡ: ವಿವಸ್ತ್ರ–ಹಲ್ಲೆ ಪ್ರಕರಣದ ತನಿಖೆ ಚುರುಕು

ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ – ಸಂವಾದ: ಉದ್ಘಾಟನಾ ಗೋಷ್ಠಿಯಲ್ಲಿ ‘ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ’ ವಿಷಯದ ಕುರಿತು ಅಜಕ್ಕಳ ಗಿರೀಶ್ ಭಟ್ ಮತ್ತು ಶತಾವಧಾನಿ ಆರ್. ಗಣೇಶ್ ನಡುವಿನ ಸಂವಾದ ವಿಶೇಷ ಗಮನ ಸೆಳೆಯಿತು.


ಮೌಲ್ಯಗಳ ಕುರಿತು ಮಾತನಾಡಿದ ಗಣೇಶ್, “ಅಖಂಡ ಭಾರತದ ಸಂವೇದನೆಯಲ್ಲಿ ಮೌಲ್ಯಗಳು ಸಾಹಿತ್ಯದಲ್ಲಷ್ಟೇ ಅಲ್ಲ, ಎಲ್ಲಾ ಕಲೆಗಳಲ್ಲೂ ಅಡಗಿವೆ. ಸಾಹಿತ್ಯದ ಮೂಲಕ ಬರುವ ಮೌಲ್ಯಗಳು ಧ್ವನಿ ಮತ್ತು ರಸ ಮಾರ್ಗದಲ್ಲಿ ವ್ಯಕ್ತವಾಗುತ್ತವೆ. ಸಂವೇದನೆಯನ್ನು ಕೇವಲ ಬುದ್ಧಿಯಿಂದ ಹೆಚ್ಚಿಸಲು ಸಾಧ್ಯವಿಲ್ಲ; ಅದಕ್ಕೆ ಭಾವ ಅಗತ್ಯ” ಎಂದರು.ಸಾಹಿತ್ಯ ರಚನೆಯ ಕುರಿತು ಅಭಿಪ್ರಾಯಪಟ್ಟ ಅವರು, “ಸಮಸ್ಯೆಯನ್ನೇ ಕೇಂದ್ರವಾಗಿಟ್ಟುಕೊಂಡು ಬರೆಯಲಾದ ಸಾಹಿತ್ಯ ದೀರ್ಘಕಾಲ ನಿಲ್ಲುವುದಿಲ್ಲ. ಸಮಸ್ಯೆಯ ಆಳದಲ್ಲಿರುವ ಮಾನವನ ಮನಸ್ಥಿತಿಯನ್ನು ಗ್ರಹಿಸಿದಾಗಲೇ ಸಾಹಿತ್ಯ ಶಾಶ್ವತವಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ:  VB-G RAM G: ಕೃಷಿ ಕಾಯ್ದೆಗಳಂತೆ ಇದೂ ವಾಪಸ್ ಆಗಲಿದೆ

ಗಣ್ಯರ ಉಪಸ್ಥಿತಿ ಮತ್ತು ಗೌರವ ನಮನ: ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಟ್ರಸ್ಟಿ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಲಕ್ಷ್ಮೀ ಮಠದಮೂಳೆ ಅವರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಡಾ. ವಿದ್ಯಾ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಆರ್‌ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು

Previous article‘Jana Nayagan’ ಬಿಡುಗಡೆಗೆ ಕಾನೂನು ಅಡೆತಡೆ: ಅನಿಶ್ಚತೆಯಲ್ಲಿ ದಳಪತಿ ವಿಜಯ್ ಕೊನೆಯ ಸಿನಿಮಾ