ಜ.11ರಂದು ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭವ್ಯ ಕಾರ್ಯಕ್ರಮ
ಮಂಗಳೂರು: ಜಗದ್ಗುರು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿಯ ಮಂಗಳೋತ್ಸವ ಕಾರ್ಯಕ್ರಮವನ್ನು ಕಾಶೀಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜನವರಿ 11ರಂದು ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತಿಭಾವಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭವ್ಯ ಮಂಗಳೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
70 ವರ್ಷಗಳ ಪೀಠ ಸೇವೆ – ಭಕ್ತಿಮಾರ್ಗದ ಪ್ರಸಾರ: ಕಾಶೀಮಠದ 20ನೇ ಪೀಠಾಧೀಪತಿಗಳಾಗಿದ್ದ ಜಗದ್ಗುರು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಸುಮಾರು 70 ವರ್ಷಗಳ ಕಾಲ ಪೀಠ ಸೇವೆ ಸಲ್ಲಿಸಿ, ಸಮಾಜದ ಮನೆಮನೆಗಳಲ್ಲಿ ಭಜನೆಯ ಮೂಲಕ ಭಕ್ತಿಮಾರ್ಗವನ್ನು ಜನಪ್ರಿಯಗೊಳಿಸಿದ ಮಹಾನ್ ಯೋಗಿಗಳು ಎಂದು ಶೆಣೈ ಸ್ಮರಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನಿರಂತರ ಶ್ರಮಿಸಿದ್ದಾರೆ: ಮಾಜಿ ಸಚಿವ ಬಿ. ರಮಾನಾಥ ರೈ
ಶ್ರೀಗಳ ಜನ್ಮಶತಮಾನೋತ್ಸವದ ಅಂಗವಾಗಿ ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಭಾರತ ಹಾಗೂ ವಿದೇಶಗಳಲ್ಲೂ ಸೇರಿ ಸುಮಾರು 10 ಸಾವಿರಕ್ಕೂ ಅಧಿಕ ಘರ್ ಘರ್ ಭಜನೆ, ಗುರುಗುಣಗಾನ, ವ್ಯಾಸೋಪಾಸನೆ ಹಾಗೂ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ ಎಂದು ವಿವರಿಸಿದರು.
ಪರಿಸರ ಸಂರಕ್ಷಣೆಗೆ ಸಂದೇಶ: ಪರಿಸರ ಕಾಳಜಿಯ ಸಂಕೇತವಾಗಿ ಶ್ರೀಗಳ ಸ್ಮರಣಾರ್ಥವಾಗಿ ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಹರಿದ್ವಾರದಲ್ಲಿ ಒಟ್ಟು ಸುಮಾರು 65 ಸಾವಿರ ಫಲ ನೀಡುವ ಗಿಡಗಳನ್ನು ವಿತರಿಸಿ ನೆಡಲಾಗಿದೆ. ಇದು ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕ್ರಿಕೆಟ್ ಹಬ್ಬ: ಮಹಿಳಾ ಪ್ರೀಮಿಯರ್ ಲೀಗ್ 4ನೇ ಸೀಸನ್‌ಗೆ ಕ್ಷಣಗಣನೆ
ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ: ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಬದ್ರಿಯಿಂದ ರಾಮೇಶ್ವರ–ತಿರುವನಂತಪುರದವರೆಗೆ ಸಂಚರಿಸಿ ಇದೀಗ ಮಂಗಳೂರಿಗೆ ಆಗಮಿಸಿದೆ. ಜನವರಿ 11ರಂದು ಮಧ್ಯಾಹ್ನ 3.30 ಗಂಟೆಗೆ ಕೊಂಚಾಡಿ ಕಾಶೀಮಠದಿಂದ ಭಜನಾಸಂಕೀರ್ತನಾ ಪಾದಯಾತ್ರೆ ಆರಂಭವಾಗಿ, ನಗರದ ಪ್ರಮುಖ ಮಾರ್ಗಗಳ ಮೂಲಕ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.
ಮಂಗಳೋತ್ಸವ ಸಭಾ ಕಾರ್ಯಕ್ರಮ: ಅಂದು ರಾತ್ರಿ 8.30 ಗಂಟೆಯಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾಶೀಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಚನ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ‘ಕಲ್ಟ್’ನಿಂದ ದಾವಣಗೆರೆಯ ಜನರೆದುರು ‘ಹೃದಯದ’ ಹಾಡು ಅನಾವರಣ
ಪಾದಯಾತ್ರೆ ಹಾಗೂ ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮದ ಸಂಚಲನ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕುರಿತು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ವಾಹನಗಳನ್ನು ಕೊಂಚಾಡಿ ಕಾಶೀಮಠದ ಬಳಿಯಿರುವ ಕೆನರಾ ವಿಕಾಸ್ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಮನವಿ ಮಾಡಿದರು.
ಕೊಂಚಾಡಿ ಕಾಶೀಮಠದ ಬಳಿ ಜನರನ್ನು ಇಳಿಸಿ, ಹಂಪನಕಟ್ಟೆ ಮೂಲಕ ಮೂಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯಿಂದ ಎಲೋಶಿಯಸ್ ಕಾಲೇಜು ಗೇಟ್ ನಂ.1 ಹಾಗೂ ಗೇಟ್ ಸಿ ಒಳಗೆ ಪಾರ್ಕಿಂಗ್ ವ್ಯವಸ್ಥೆ. ಕಾರುಗಳಿಗೆ ಕೊಡಿಯಾಲ್‌ಬೈಲ್ ಎಸ್‌ಡಿಸಿಸಿ ಬ್ಯಾಂಕ್ ಪಕ್ಕದ ಎಲೋಶಿಯಸ್ ಕಾಲೇಜು ಗೇಟ್ ಮೂಲಕ ಲೊಯಲಾ ಸಭಾಂಗಣ ಮೈದಾನದಲ್ಲಿ ಪಾರ್ಕಿಂಗ್. ಬೆಸೆಂಟ್ ಕಾಲೇಜು, ಕೊಂಚಾಡಿ ಕೆನರಾ ವಿಕಾಸ್ ಕಾಲೇಜು ಮೈದಾನದಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ‘ವಿಜಯ’ ಯಾತ್ರೆಗೆ ತೊಡಕು: ‘ನಾಯಕನ’ ದರ್ಶನ ಕೊಂಚ ತಡ
ಕೆನರಾ ವಿಕಾಸ್ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ರಾತ್ರಿ 10 ಗಂಟೆಯ ನಂತರ ಸಿಟಿ ಪಾಯಿಂಟ್ – ಪಾಸ್‌ಪೋರ್ಟ್ ಕಚೇರಿ ಬಳಿ ತಂದು ನಿಲ್ಲಿಸಲಾಗುವುದು ಎಂದು ತಿಳಿಸಿದರು.
ಭಕ್ತರಿಗೆ ಅನ್ನಸಂತರ್ಪಣೆ: ರಾತ್ರಿ 8.30ರ ನಂತರ ಊರ ಮತ್ತು ಪರವೂರ ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದ್ದು, ಮಹಾಮಾಯಾ ದೇವಸ್ಥಾನದ ಬಳಿ ಉಮಾಮಹೇಶ್ವರ ದೇವಸ್ಥಾನದ ಬಳಿ, ಭವಂತಿ ಸ್ಟ್ರೀಟ್‌ನಲ್ಲಿರುವ ಹಿಂದಿನ ನ್ಯೂ ಮಂಗಳೂರು ಹೆಲ್ತ್ ಕೇರ್ ಸೆಂಟರ್ ಜಾಗಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೊಕ್ತೇಸರ ಜಗನ್ನಾಥ್ ಕಾಮತ್, ವಾಸುದೇವ್ ಕಾಮತ್, ರಘುವೀರ್ ಭಂಡಾರಕಾರ್, ಟಿ. ಗಣಪತಿ ಪೈ, ಪ್ರಶಾಂತ್ ಪೈ, ಕೋಟೇಶ್ವರ ದಿನೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.





















