ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಆತಂಕ, ದುಗುಡ ಹೆಚ್ಚಿದೆ. ನೆಮ್ಮದಿ ಕದಡಿದೆ. ಬದುಕಿನುದ್ದಕ್ಕೂ ಹೋರಾಟವೇ ಅನಿವಾರ್ಯ ಎನ್ನುವ ಹತಾಶ ಮನಸ್ಥಿತಿಗೆ ಜನ ಬಂದು ತಲುಪಿದ್ದಾರೆ.
ನಾಲ್ಕು ಯೋಜನೆಗಳು ಈಗ ಅನುಷ್ಠಾನಕ್ಕಾಗಿ ನದಿ, ಕಾಡು, ಕಡಲಿನ ಮಧ್ಯೆ ತಲ್ಲಣ ಮೂಡಿಸಿವೆ. ಬೇಡ್ತಿ, ಶಾಲ್ಮಲಾ ನದಿಯ ನೀರನ್ನು ವರದಾ ನದಿಗೆ ಜೋಡಿಸಿ ತನ್ಮೂಲಕ ಬಯಲು ನಾಡಿನಲ್ಲಿ ನೀರುಣಿಸುವುದು; ಅಘನಾಶಿನಿ ನದಿಗೆ ಕಾಡಲ್ಲಿ ಆಣೆಕಟ್ಟು ಕಟ್ಟಿ, ಆ ನೀರನ್ನು ವೇದಾವತಿ ನದಿಗೆ ಜೋಡಿಸಿ ಚಿತ್ರದುರ್ಗದ ವಾಣಿವಿಲಾಸಸಾಗರ ಜಲಾಶಯಕ್ಕೆ ಹರಿಸಿ ಅಲ್ಲಿಂದ ಆ ಜಲಾನಯದ ಪ್ರದೇಶದ ಊರುಗಳಿಗೆ ನೀರುಣಿಸುವುದು, ಶರಾವತಿಯ ಟೇಲರೀಸ್ ನಂತರ ಭೂತಲ ಜಲವಿದ್ಯುತ್ ಯೋಜನೆ ನಿರ್ಮಿಸಿ ಆ ನೀರನ್ನು ಮತ್ತು ವಿದ್ಯುತ್ ಅನ್ನು ಬೆಂಗಳೂರಿಗೆ ರವಾನಿಸುವುದು, ಬಳ್ಳಾರಿ, ಆಂಧ್ರ, ಮಹಾರಾಷ್ಟ್ರಗಳ ಮ್ಯಾಂಗನೀಸ್ ಬಗೆದು ಅಂಕೋಲಾದ ಮೂಲಕ ವಿದೇಶಗಳಿಗೆ ರಫ್ತು ಮಾಡಲು ಮೀನುಗಾರರ ಬದುಕು ಹೊಸಕಿ ಹಾಕಿ ಕೇಣಿ ಬಂದರು ನಿರ್ಮಿಸುವುದು… ಇವು ಈಗ ಭುಗಿಲೆದ್ದು ಸಹ್ಯಾದ್ರಿಯ ಮೇಲೆ ಪ್ರಹಾರಕ್ಕೆ ಸಿದ್ಧವಾಗಿರುವ ಯೋಜನೆಗಳು.
ಇವುಗಳ ಜೊತೆಗೆ ಹುಬ್ಬಳ್ಳಿ – ಅಂಕೋಲಾ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಹೊನ್ನಾವರದ ಟೊಂಕ ಮೀನುಗಾರಿಕಾ ಬಂದರು, ಹಾಗೇ ಅರಣ್ಯ ಭೂಮಿ ಅತಿಕ್ರಮಣದಾರರ ಒಕ್ಕಲೆಬ್ಬಿಸುವಿಕೆ ಇತ್ಯಾದಿ… ಒಟ್ಟಾರೆ ಮಲೆನಾಡು- ಕರಾವಳಿಯ ಮಂದಿ ನೆಮ್ಮದಿಯ ಜೀವನ ನಡೆಸದಂತಹ ಸ್ಥಿತಿ!!
ಈ ಆತಂಕ ಮತ್ತು ಯೋಜನೆಗಳ ವಿರೋಧವಾಗಿ, ಶಾಶ್ವತವಾಗಿ ಇಂತಹ ಯೋಜನೆಗಳನ್ನು ಕೈಬಿಡಿ ಎಂದು ಒತ್ತಾಯಿಸಿ ಈಗ ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಶುರವಾಗಿದೆ. ಇಡೀ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಿಯೇ ಸಂಚರಿಸಿ, ಯಾರನ್ನೇ ಮಾತನಾಡಿಸಿ, ಇನ್ನೆಷ್ಟು ದಿನ ನಮ್ಮ ಬದುಕು; ಯಾರನ್ನು ನಂಬೋದು; ಎಲ್ಲ ರಾಜಕಾರಣ ಕಣ್ರೀ' ಎನ್ನುವುದೇ ಮಾತು.ಹೆಂಗ್ರೀ ಮುಂದೆ.. ಎನ್ನುವುದೇ ಎಲ್ಲರ ಪ್ರಶ್ನೆ.
ಹೌದು. ಏಕೆ ಆಗಾಗ, ಇಂತಹ ಯೋಜನೆಗಳು ಧುತ್ತೆಂದು ಎದ್ದೇಳುತ್ತವೆ? ಜನವಿರೋಧಿ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡುವ ಯಾವೊಂದೂ ಆದೇಶ, ನಿರ್ಧಾರ ಇದುವರೆಗೆ ಏಕೆ ಬಂದಿಲ್ಲ?
ಮಲೆನಾಡು ರಾಜಕಾರಣವೇ ಹಾಗೆ. ಜನ ಬುದ್ಧಿವಂತರು. ಆದರೆ ಅಷ್ಟೇ ಅಮಾಯಕರು. ಎಲ್ಲರನ್ನೂ ನಂಬಿ ಬದುಕುವ ಮುಗ್ಧ ಜನ. ನಮಗೇಕೆ ಉಸಾಬರಿ ಎಂದು ನಿರ್ಲಿಪ್ತರಾಗಿರುವರು ರಾಜಕಾರಣದ ಒಳಸುಳಿ ಅರ್ಥವಾದರೂ, ಪ್ರಶ್ನಿಸುವುದಿಲ್ಲ. ಈಗ ನೋಡಿ ಪ್ರಸ್ತಾಪಿಸಲ್ಪಟ್ಟ ನಾಲ್ಕೂ ಯೋಜನೆಗಳ ಹಿಂದಿನ ರಾಜಕೀಯ ವರಸೆ.
ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಮಾತು ಇಂದು ನಿನ್ನೆಯದ್ದಲ್ಲ. ಎರಡು ದಶಕಗಳ ಆಲೋಚನೆ ಇದು. ಅಂದಿನ ಕೇಂದ್ರ ಜಲ ಆಯೋಗದ ವರದಿಯಲ್ಲಿ ಇವು ಪ್ರಸ್ತಾಪವಾಗಿದೆ. ಬೇಡ್ತಿ, ಪಟ್ಟದಹಳ್ಳ, ಶಾಲ್ಮಲೆಯನ್ನು ವರದೆಗೆ ಜೋಡಿಸಿ ಅಲ್ಲಿಂದ ತುಂಗಭದ್ರೆ ಪಾತ್ರದ ಮೂಲಕ ರಾಯಚೂರುವರೆಗೂ ನೀರುಣಿಸುವುದು!
ಯೋಜನೆ ವಿವರಿಸುವಾಗ ಮಳೆಗಾಲದಲ್ಲಿ ಪ್ರವಾಹದ ನೀರನ್ನು ಹಿಡಿದಿಟ್ಟು ಒಯ್ಯುತ್ತೇವೆ ಎಂದು ತಿಳಿಸಲಾಗಿದೆ. ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದರೆ ಅರಣ್ಯ ನಾಶವಾಗದು ಎನ್ನುವುದು ಕುತರ್ಕ.
ಈಗ ಪ್ರಕೃತಿಯ ಮಡಿಲ ಮಕ್ಕಳು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಬೇಡ್ತಿ – ಅಘನಾಶಿನಿ ಯೋಜನೆಗಳನ್ನು ವಿರೋಧಿಸಿ ಸ್ವಾಮೀಜಿ ಮತ್ತು ಪರಿಸರವಾದಿಗಳೆಲ್ಲ ಧ್ವನಿ ಎತ್ತಿದ್ದಾರೆ. ಆದರೆ ಈಗಾಗಲೇ ಡಿಪಿಆರ್ ಸಿದ್ಧವಾಗಿ ಯೋಜನೆ ಅನುಷ್ಠಾನಕ್ಕೆ ಜಲಶಕ್ತಿ ಆಯೋಗದ ಒಪ್ಪಿಗೆಯೂ ದೊರಕಿದೆ. ಹತ್ತು ಸಾವಿರ ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರವೇ 9 ಸಾವಿರ ಕೋಟಿ ರೂಪಾಯಿ ಕೊಡುತ್ತಿದೆ. ಒಂದು ಸಾವಿರ ಕೋಟಿಯನ್ನು ರಾಜ್ಯ ಭರಿಸುತ್ತಿದೆ.
ಎದ್ದಿರುವ ಮೊದಲ ಪ್ರಶ್ನೆ ಎಂದರೆ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಲೇ ಈ ಯೋಜನೆ ಬಜೆಟ್‌ನಲ್ಲಿ ಸೇರ್ಪಡೆಗೊಂಡಿತ್ತು. ಆ ನಂತರ ಬಂದ ಸರ್ಕಾರಗಳು ಯೋಜನೆಯ ರೂಪುರೇಷೆಗೆ ಒತ್ತಾಯಿಸುತ್ತಲೇ ಇವೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ (ಪ್ರಥಮ ಫಲಾನುಭವಿ ಕೂಡ ಅವರೇ ಆಗಲಿದ್ದಾರೆ) ಹಾವೇರಿಗೆ ನೀರು ಸಿಗುತ್ತದೆ ಎಂಬ ಕಾರಣಕ್ಕೆ ಡಿಪಿಆರ್‌ಗೆ ಒಪ್ಪಿಗೆ ದೊರಕಿಸಿಕೊಂಡಿದ್ದಾರೆ.
ಗೊಂದಲ ಇರುವುದೇ ಇಲ್ಲಿ. ಉತ್ತರ ಕನ್ನಡದ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಂದು ವಿಧಾನಸಭೆ ಸ್ಪೀಕರ್ ಕೂಡ ಆಗಿದ್ದವರು. ಯೋಜನೆ ಕಡತದ ಬಗ್ಗೆ ಪ್ರತಿ ಮಾಹಿತಿ ಅವರಿಗೆ ಗೊತ್ತು. ಆಗ ವಿರೋಧಿಸಲಿಲ್ಲ. ಈಗ ವಿರೋಧಿಸುತ್ತಿದ್ದಾರೆ. ಹಾಗೇ ಅಂದಿನ ಜಲಸಂಪನ್ಮೂಲ ಮತ್ತು ಅರಣ್ಯ ಸಚಿವರಾದವರಿಗೆಲ್ಲ ಗೊತ್ತು. ಆಗ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈಗ ಉತ್ತರ ಕನ್ನಡದ ಧಾರಣಾ ಶಕ್ತಿಯ ಅಧ್ಯಯನವಾಗಬೇಕು; ಹೋರಾಟಕ್ಕೆ ತನ್ನ ಬೆಂಬಲವಿದೆ ಎಂದು ಹಾಲಿ ಸಂಸದರು ಹೇಳಿದರೆ, ಹಾವೇರಿಯ ಇಂದಿನ ಸಂಸದ ಮತ್ತು ಅಂದಿನ ಸಿಎಂ ಬೊಮ್ಮಾಯಿ, ಯೋಜನೆಯಿಂದ ಯಾವ ಹಾನಿಯೂ ಆಗದು ಎಂದು ಬಚಾವತ್ ಆಯೋಗದ ವರದಿಯಿಂದ ಹಿಡಿದು ಇಂದು ಡಿಪಿಆರ್ ಹಂತದವರೆಗೆ ತಂದು, ಯೋಜನೆ ಅನುಷ್ಠಾನ ಆಗೇ ಆಗುತ್ತದೆ ಎಂದು ಬೇಡ್ತಿ ನೆಲದಲ್ಲಿ ಹೇಳಿದ್ದಾರೆ.!
ಅಘನಾಶಿನಿ – ವೇದಾವತಿ ಕಥೆ ಕೂಡ ಹೀಗೇ. ಈ ಯೋಜನೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಇನ್ನೂ ಡಿಪಿಆರ್ ಹಂತದಲ್ಲಿ ಇದೆ. ಈ ಯೋಜನೆಯ ರೂಪುರೇಷೆ ಸಿದ್ಧವಾಗ ತೊಡಗಿದ್ದೂ ಕೂಡ ದಶಕದಿಂದಲೇ. ಸಂಬಂಧಿಸಿದ ಕಡತ ಓಡಾಟಕ್ಕೆ ಈಗ ಬೇಳೂರು ಗೋಪಾಲಕೃಷ್ಣ, ಭೀಮಣ್ಣ, ಹರತಾಳು ಹಾಲಪ್ಪ ಎಲ್ಲರೂ ವಿರೋಧಿಸುತ್ತಿದ್ದಾರೆ. ಶಿವಮೊಗ್ಗ ಸಂಸದ, ಉತ್ತರ ಕನ್ನಡದ ಸಂಸದ ಇಬ್ಬರೂ ಯೋಜನೆಯ ಬಗ್ಗೆ ಚರ್ಚೆ ಅಗತ್ಯ ಎನ್ನುವ ವಾದವನ್ನು ಮಂಡಿಸುತ್ತಿದ್ದಾರೆ. ಇತ್ತ, ಎತ್ತಿನಹೊಳೆಗಿಂತಲೂ ಅತೀ ದೊಡ್ಡದಾದ ಅದೇ ರೀತಿಯ ಯೋಜನೆಯ ರೂಪುರೇಷೆ ಸಿದ್ಧವಾಗುತ್ತಿದೆ.
ಶರಾವತಿ ಪಂಪ್ಡ್ ಯೋಜನೆಯನ್ನು ಕೂಡ ಇದೇ ಸ್ಥಿತಿ. ಹಿಂದೆ ವಿದ್ಯುತ್ ಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಕಾಲದಲ್ಲೇ ಈ ಯೋಜನೆಯ ಬೀಜಾಂಕುರವಾಗಿತ್ತು. ಈಗ ಅನುಷ್ಠಾನದ ಹಂತಕ್ಕೆ ಬಂದಿದೆ. ಯೋಜನೆಯ ಗುತ್ತಿಗೆ ಪಡೆದ ಕಂಪನಿ ದೇಶದಲ್ಲೇ ಅತೀ ಹೆಚ್ಚು ಎಲೆಕ್ಷನ್ ಬಾಂಡ್ ಖರೀದಿಸಿ ಬಿಜೆಪಿ, ಕಾಂಗ್ರೆಸ್‌ಗೆ ದೇಣಿಗೆ ನೀಡಿದ ಹಾಗೂ ಆ ನಂತರ ಗುತ್ತಿಗೆ ಪಡೆದ ಸಂಸ್ಥೆ. ಅಂದರೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ರಾಜ್ಯ ಸರ್ಕಾರಗಳ, ಎರಡೂ ಪಕ್ಷಗಳ ಒಳ ಒಪ್ಪಂದ ಮೊದಲು ಆಗಿರುವುದರಿಂದಲೇ ಯಾರ ಅಡೆತಡೆ ಬಂದರೇನು ಎನ್ನುವ `ಬಂಡೆ’ ಕದಲದ ಸ್ಥಿತಿಯಲ್ಲಿ ಯೋಜನೆ ಇದೆ! ಸ್ವತಃ ಉಪಮುಖ್ಯಮಂತ್ರಿ ಕರಾವಳಿ ಉತ್ಸವಕ್ಕೆ ಬಂದಾಗ, ಬೇಡ್ತಿ-ವರದಾ ಜೋಡಣೆ ಯೋಜನೆ; ಶರಾವತಿ ಪಂಪ್ಡ್ ಯೋಜನೆ ಅಚಲ ಎಂದು ಹೇಳುವಾಗ, ಯೋಜನೆ ವಿರೋಧಿಸುತ್ತೇವೆಂದು ಸೆಟೆದು ಹೇಳುತ್ತಿದ್ದ, ಸಚಿವ ಮಂಕಾಳು ವೈದ್ಯ, ಶಾಸಕರಾದ ಭೀಮಣ್ಣ ನಾಯಕ, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ ಯಾರೂ ತುಟಿ ಪಿಟಕ್ಕೆನ್ನಲಿಲ್ಲ!!
ಈ ರಾಜಕಾರಣದ ಒಳಸುಳಿ ಜಿಲ್ಲೆಯ ಜನಕ್ಕೆ ಹೊಸದೇನೂ ಅಲ್ಲ. ಶರಾವತಿ ಟೇಲರೀಸ್ ಜಾರಿಯಾಗುವಾಗ, ಸೀಬರ್ಡ್ ಪರ ವಿರೋಧ ಘರ್ಷಣೆ ತೀವ್ರಗೊಂಡಾಗ, ಕೈಗಾ ವಿರೋಧಿಸಿ ರಾಷ್ಟ್ರವ್ಯಾಪಿ ಹೋರಾಟಗಳು ನಡೆದಾಗ ಈ ಜಿಲ್ಲೆಯ ಮತ್ತು ಸರ್ಕಾರಗಳ ಜನಪ್ರತಿನಿಧಿಗಳ ಧ್ವನಿ – ಸಾಮರ್ಥ್ಯ ಮತ್ತು ಬದ್ಧತೆಗಳು ಎಷ್ಟಿವೆ ಎಂಬುದು ಅರ್ಥವಾಗಿತ್ತು.
.ಕೇಣಿ ಬಂದರು ಯೋಜನೆಗೂ ಅಷ್ಟೇ. ಈ ಯೋಜನೆ ಅನುಷ್ಠಾನಕ್ಕೆ ಜಿಂದಾಲ್ ಕಂಪನಿ ಬಂಡವಾಳ ಹೂಡಿ ಗುತ್ತಿಗೆ ಪಡೆದಿದೆ. ರಾಜಕೀಯ ಪಕ್ಷಗಳಿಗೆ ಚುನಾವಣೆ ಪೂರ್ವವೇ ಅನುದಾನ ನೀಡಿದ್ದರಿಂದ ಇಂತಹ ಯೋಜನೆಗಳು ನಿರಾಯಾಸವಾಗಿ ಮಂಜೂರಾಗುತ್ತವೆ. ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ, ಬದ್ಧತೆಗಳು ಈಗ ಜನರಿಗೆ ಅರ್ಥವಾದಂತಿದೆ. ಸತೀಶ್ ಸೈಲ್, ಮಂಕಾಳು ವೈದ್ಯ, ಕಾಗೇರಿ ವಿಶ್ವೇಶ್ವರ ವಿರೋಧಿಸಿದರೆಷ್ಟು? ಬಿಟ್ಟರೆಷ್ಟು? ಯೋಜನೆ ಸ್ಥಗಿತಗೊಳ್ಳಲ್ಲ. ಈ ಹಿನ್ನೆಲೆಯಲ್ಲೋ ಏನೋ, ಸ್ವತಃ ಶ್ರೀ ಸರ್ವಜ್ಞೇಂದ್ರ ಶ್ರೀಗಳೇ, ನಮ್ಮ ಜನಪ್ರತಿನಿಧಿಗಳದ್ದು ಕೂಡ ದೊಡ್ಡ ನಿರ್ಲಕ್ಷ್ಯತನವಿದೆ ಎಂದು ವಿಷಾದವನ್ನೇ ವ್ಯಕ್ತಪಡಿಸಿದರು. ಇಲ್ಲಿ ಸಂಸದ ಕಾಗೇರಿ ವಿರೋಧಿಸುವುದು; ಅಲ್ಲಿ ಬೊಮ್ಮಾಯಿ ಬೆಂಬಲಿಸುವುದು… ರಾಘವೇಂದ್ರ ಯಡಿಯೂರಪ್ಪ ಸೈ ಎನ್ನುವುದು; ಮಂಕಾಳು ವೈದ್ಯ ನನ್ನ ವಿರೋಧ ಇದೆ ಎಂದು ಘೋಷಿಸುವುದು, ಡಿಸಿಎಂ ಡಿ.ಕೆ. ಶಿವಕುಮಾರ ಈ ಯೋಜನೆ ಅನುಷ್ಠಾನವಾಗಲೇಬೇಕು ಎಂದು ಪಟ್ಟು ಹಿಡಿಯುವುದು…!
ಮಲೆನಾಡು ಮತ್ತು ಕರಾವಳಿಯ ಅಮಾಯಕ, ಮುಗ್ಧ ಹಾಗೂ ಸೌಮ್ಯ ಜನ ಈ ರಾಜಕೀಯ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳೋದು ಯಾವಾಗ?
ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ರಾಜಕೀಯ ಶಕ್ತಿ ನಿಸ್ತೇಜವಾಗಿದೆ. ತೋಟಿಗರ, ಕೃಷಿಕರ, ಮಕ್ಕಳು ಈಗ ಊರಲ್ಲಿಲ್ಲ. ಎಲ್ಲ ರಾಜಧಾನಿ ಸೇರಿದ್ದಾರೆ. ಹಳ್ಳಿಗಳಲ್ಲಿ ವೃದ್ಧರು, ಐವತ್ತರ ನಂತರದ ಹಿರಿಯರು ಮಾತ್ರ ಉಳಿದಿದ್ದಾರೆ. ಊರಲ್ಲಿ ಏನೂ ಸೌಲಭ್ಯ ಇಲ್ಲದಿರುವಾಗ, ಅಡಿಕೆಗೆ ಎಲೆಚುಕ್ಕಿ, ಕಾಳು ಮೆಣಸಿಗೆ ಕಟ್ಟೆ, ಸದಾ ನೆರೆ, ಗಾಳಿ ಮಳೆ, ಕೋಲಿ ನಾಲಿ ಸಮಸ್ಯೆ, ಅಧಿಕಾರಿಗಳ ಕಿರುಕಳ ಹೀಗೆ ನಿತ್ಯವೂ ಹೋರಾಟದ ಬದುಕು. ಹಾಗಿದ್ದಾಗ ಪೇಟೆ ಸೇರಿದ ಮಕ್ಕಳು ಕೂಡ `ಹೋಗಲಿ ಬಿಡಿ ಜಮೀನು, ಪರಿಹಾರವಾದರೂ ಸಿಗುತ್ತದೆ’ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ!
ಹಾಗಾಗಿ ಎಂಬತ್ತರ ದಶಕದ ಬೇಡ್ತಿ- ಅಘನಾಶಿನಿ ವಿರೋಧಿ ಹೋರಾಟ ಯಶಸ್ವಿಗೆ ಅಂದು ಕಣಿವೆಯಲ್ಲಿ ಜೀವ-ಜೀವನ, ಬದುಕಿನ ಕನಸು ಎಲ್ಲವೂ ಇತ್ತು. ಈಗ ಹತ್ತಾರು ಗೊಂದಲ. ಹಾಗೇ ಕೈಗಾ, ಸೀಬರ್ಡ್, ಕಾಳಿ ಸಮಯದಲ್ಲಿನ ಹೋರಾಟಗಾರರು ಈಗಿಲ್ಲ.
ಇರುವ ಹೋರಾಟಗಾರರಲ್ಲೂ ರಾಜಕೀಯ ವಾಂಛೆ, ವಾಸನೆ. ಆದ್ದರಿಂದ ನಂಬೋದು ಯಾರನ್ನು? ಹೇಗೆ? ಇವು ಜನರ ಸಹಜ ಪ್ರಶ್ನೆಗಳು. ಮಲೆನಾಡು- ಕರಾವಳಿ ರಾಜಕಾರಣಿಗಳು ಈ ಬಾರಿಯಾದರೂ ಸ್ವ ಹಿತಾಸಕ್ತಿ ಕಿತ್ತೆಸೆದು ತನಗಾಗಿ ನಿರ್ಣಾಯಕ ತ್ಯಾಗಗಳನ್ನು ಮಾಡಲಿ ಎಂದು ಪರಿಸರ ಕೇಳುತ್ತಿದೆ!




















