ದಾವಣಗೆರೆ(ಜಗಳೂರು): ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ನಮ್ಮಲ್ಲಿ ಹೈಕಮಾಂಡ್ ಇದೆ. ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಬೇರೆ ಯಾರೂ ಹೇಳುವ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಡಿಕೆಶಿ ಆಪ್ತರಿಗೆ ಟಾಂಗ್ ನೀಡಿದರು.
ಪೊಲೀಸರ ವೈಫಲ್ಯ ಒಪ್ಪಿಕೊಂಡ ಜಮೀರ್: ಬಳ್ಳಾರಿಯಲ್ಲಿ ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮೃತ ರಾಜಶೇಖರ್ ಸಾವು ಪ್ರಕರಣದಲ್ಲಿ ಪೊಲೀಸರು ಜಾಗ್ರತೆ ವಹಿಸಿ ತಡೆಯಬಹುದಿತ್ತು. ಜೊತೆಗೆ ಗುಪ್ತಚರ ಇಲಾಖೆ ಇದೆ. ಈ ಮಾಹಿತಿ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ಗಲಾಟೆ ಶುರುವಾಗಿದೆ. ಆದರೆ ಗಲಾಟೆ ತಡೆಗೆ ವಿಫಲ ಹಿನ್ನೆಲೆಯಲ್ಲಿ ಐಜಿ ವರ್ತಿಕಾ ಕಟಿಯಾರ್ ವರ್ಗಾವಣೆಯಾಗಿದೆ, ನನಗೂ ಈಗಲೇ ಗೊತ್ತಾಯಿತು. ಕಾರಣವಿಲ್ಲದೆ ಸಿಎಂ, ಗೃಹ ಸಚಿವರು ವರ್ಗಾವಣೆ ಮಾಡುವುದಿಲ್ಲ ಎಂದರು.
ಇದನ್ನೂ ಓದಿ: ಹಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆಯ ಭಾಷಣ
ಸತೀಶ್ ರೆಡ್ಡಿ ಗನ್‌ಮ್ಯಾನ್ ಗುಂಡಿಗೆ ರಾಜಶೇಖರ್ ಬಲಿ: ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್ ಹಾರಿಸಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದಾರೆ ಎಂಬುದನ್ನು ಪೊಲೀಸರು ಖಚಿತಪಡಿಸಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಮೀರ್, ಶಾಸಕ ಭರತ್ ರೆಡ್ಡಿ ಅವರು ಸ್ಥಳಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಎಂಬುದನ್ನು ಐಜಿಪಿ ವಿವರಣೆ ನೀಡಿದ್ದಾರೆ. ಬ್ಯಾನರ್ ಕಿತ್ತು ಹಾಕಿ ಸತೀಶ್ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಸಂಜೆ 7ರ ಬಳಿಕ ಭರತ್ ರೆಡ್ಡಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು. ರಾಜಶೇಖರ ಅವರ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ಮಾಡಿಲ್ಲ. ಇದು ಸಾಧ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಶೇಖರ ಅವರ ಸಾವಿಗೆ ಬೆಲೆ ಕಟ್ಟಲಾಗದು: 50 ಕೋಟಿ ಕೊಟ್ಟರು ರಾಜಶೇಖರ ಅವರನ್ನು ಜೀವಂತವಾಗಿ ತರಲು ಆಗುವುದಿಲ್ಲ. ಅವರ ಕುಟುಂಬಕ್ಕೆ ಸಣ್ಣದೊಂದು ಕಾಣಿಕೆ ನೀಡಿದ್ದೇನೆ. 25 ಲಕ್ಷ ಕೊಟ್ಟಿರುವುದಾಗಿ ಎಲ್ಲಿಯೂ ಹೇಳಿಲ್ಲ. ಒಂದು ವೇಳೆ ಇಷ್ಟು ಮೊತ್ತವನ್ನು ಕೊಟ್ಟಿದ್ದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖುಷಿ ಪಡಬೇಕಿತ್ತು. ಬಡವರಿಗೆ ಸಹಾಯ ಮಾಡಿದರೆ ಏಕಿಷ್ಟು ಅಸಹನೆ ಎಂದು ಎಚ್‌ಡಿಕೆಗೆ ತೀರುಗೇಟು ನೀಡಿದರು.























