Home ನಮ್ಮ ಜಿಲ್ಲೆ ಬೆಳಗಾವಿ ಬಾಯ್ಲರ್ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಆರು ಮಂದಿಗೆ ಗಂಭೀರ ಗಾಯ

ಬಾಯ್ಲರ್ ಸ್ಫೋಟ: ಇಬ್ಬರು ಕಾರ್ಮಿಕರ ಸಾವು, ಆರು ಮಂದಿಗೆ ಗಂಭೀರ ಗಾಯ

0
14

ಬೆಳಗಾವಿ / ಬೈಲಹೊಂಗಲ: ಜಿಲ್ಲೆಯಲ್ಲಿ ಮನಕಲಕುವ ಭಾರೀ ಕೈಗಾರಿಕಾ ದುರಂತವೊಂದು ಸಂಭವಿಸಿದ್ದು, ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಕಾರ್ಖಾನೆಯ ಬಾಯ್ಲರ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಏಕಾಏಕಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಿಸಿ ಪದಾರ್ಥಗಳು (ಮಳ್ಳಿ) ಕಾರ್ಮಿಕರ ಮೇಲೆ ಎರಚಿಕೊಂಡಿದ್ದು, ಹಲವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ತುರ್ತುವಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬ ಗಾಯಾಳುವನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ, ಉಳಿದ ಐದು ಮಂದಿ ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಝಿರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಶಿಫ್ಟ್ ಮಾಡಲಾಗಿದೆ.

ಘಟನೆಯ ಕುರಿತು ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ. ರಾಮರಾಜನ್, “ಮರಕುಂಬಿಯ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಾಯ್ಲರ್ ಅವಘಡ ಸಂಭವಿಸಿದ್ದು, ಒಟ್ಟು ಎಂಟು ಮಂದಿ ಕಾರ್ಮಿಕರಿಗೆ ಬಿಸಿ ಪದಾರ್ಥ ಮೈ ಮೇಲೆ ಬಿದ್ದ ಪರಿಣಾಮ ಗಾಯಗಳಾಗಿವೆ. ಅವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ಒದಗಿಸಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತ: ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ

ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದು, ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಎಸ್‌ಪಿ ರಾಮರಾಜನ್ ಸ್ಪಷ್ಟಪಡಿಸಿದ್ದಾರೆ.

ಈ ದುರ್ಘಟನೆ ಕಾರ್ಮಿಕ ವಲಯದಲ್ಲಿ ಆತಂಕ ಮೂಡಿಸಿದ್ದು, ಸಕ್ಕರೆ ಕಾರ್ಖಾನೆಯಲ್ಲಿನ ಸುರಕ್ಷತಾ ವ್ಯವಸ್ಥೆ, ನಿರ್ಲಕ್ಷ್ಯ ಹಾಗೂ ನಿರ್ವಹಣಾ ಲೋಪದ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.