ಬಳ್ಳಾರಿ ವಲಯದಲ್ಲಿ ಕಾನೂನು ಬದ್ಧ, ನಿಷ್ಪಕ್ಷಪಾತ ಆಡಳಿತಕ್ಕೆ ಒತ್ತು: ನೂತನ ಐಜಿ ಡಾ. ಹರ್ಷ ಪಿ.ಎಸ್.

0
4

ಬಳ್ಳಾರಿ: ರಾಜ್ಯ ಸರ್ಕಾರದ ಆದೇಶದಂತೆ ಬಳ್ಳಾರಿ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿ) ಡಾ. ಹರ್ಷ ಪಿ.ಎಸ್. ಅವರು ಇಂದು ಅಧಿಕೃತವಾಗಿ ಸೇವೆಗೆ ವರದಿ ಮಾಡಿಕೊಂಡಿದ್ದಾರೆ. ಸೇವೆಗೆ ವರದಿ ಮಾಡಿಕೊಂಡ ತಕ್ಷಣವೇ ಅವರು ಬಳ್ಳಾರಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಲಯದ ಪ್ರಸ್ತುತ ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ಪರಿಸ್ಥಿತಿಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಹರ್ಷ ಪಿ.ಎಸ್. ಬಳ್ಳಾರಿ ವಲಯದಲ್ಲಿ ಒಟ್ಟು ನಾಲ್ಕು ಜಿಲ್ಲೆಗಳಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವು ಘಟನೆಗಳು ನಡೆದಿರುವ ಹಿನ್ನೆಲೆ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳಿಂದ ಕಾನೂನುಬದ್ಧ, ನಿಷ್ಪಕ್ಷಪಾತ ಮತ್ತು ಭದ್ರವಾದ ಆಡಳಿತ ವ್ಯವಸ್ಥೆ ರೂಪಿಸುವಂತೆ ಸ್ಪಷ್ಟ ಸೂಚನೆಗಳು ಬಂದಿವೆ ಎಂದು ಹೇಳಿದರು. ಆ ಸೂಚನೆಗಳಂತೆ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ : ನಾರಾ ಭರತ್ ರೆಡ್ಡಿ V/S ಜನಾರ್ದನ ರೆಡ್ಡಿ ಸಮರ CBI ತನಿಖೆಗೆ ಆಗ್ರಹ

“ನಮ್ಮ ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಸಮರ್ಥ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇದ್ದಾರೆ. ಅವರು ಶ್ರಮಪಟ್ಟು ಕೆಲಸ ಮಾಡುತ್ತಿದ್ದಾರೆ. ನಾನು ಸಂಪೂರ್ಣ ಮಾಹಿತಿ ಪಡೆದುಕೊಂಡು, ನಡೆಯುತ್ತಿರುವ ಹಾಗೂ ದಾಖಲಾಗಿರುವ ಪ್ರಕರಣಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಯಾವುದೇ ಒತ್ತಡಕ್ಕೆ ಒಳಗಾಗದೆ, ಕಟ್ಟು ನಿಟ್ಟಾಗಿ, ನಿಷ್ಪಕ್ಷಪಾತವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುತ್ತೇವೆ” ಎಂದು ನೂತನ ಐಜಿ ಸ್ಪಷ್ಟಪಡಿಸಿದರು.

ಬಳ್ಳಾರಿ ಸೇರಿದಂತೆ ವಲಯದ ಎಲ್ಲಾ ಜಿಲ್ಲೆಗಳು ಶಾಂತಿಪ್ರಿಯ ಜಿಲ್ಲೆಗಳಾಗಿವೆ ಎಂದು ಹೇಳಿದ ಅವರು, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಮತ್ತು ಜನಸ್ನೇಹಿಯಾಗಿ ಪೊಲೀಸ್ ಇಲಾಖೆ ನೀಡಬೇಕಾದ ಸೇವೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಫೈರಿಂಗ್ ಮಾಡಿಸಿದ್ದಾರೆ – ಭರತ್ ರೆಡ್ಡಿ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ

ಇನ್ನೂ ಮಾತನಾಡಿದ ಅವರು, “ನಾನು ಈಗ ಕೆಲವೇ ಕ್ಷಣಗಳ ಹಿಂದೆ ಸೇವೆಗೆ ವರದಿ ಮಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ನಾನು ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಬೌತಿಕವಾಗಿ ಪರಿಶೀಲನೆ ನಡೆಸುತ್ತೇನೆ. ಅಧಿಕಾರಿಗಳಿಂದ ನೇರವಾಗಿ ಮಾಹಿತಿ ಪಡೆದು ವಾಸ್ತವ ಸ್ಥಿತಿಯನ್ನು ಅರಿಯುತ್ತೇನೆ. ಬಳ್ಳಾರಿ ಜಿಲ್ಲೆಯ ನೂತನ ಎಸ್‌ಪಿಯವರೂ ಇಂದು ಸೇವೆಗೆ ವರದಿ ಮಾಡಿಕೊಳ್ಳಲಿದ್ದು, ಇಬ್ಬರೂ ಸೇರಿ ಸ್ಥಳ ಪರಿಶೀಲನೆ ನಡೆಸುತ್ತೇವೆ” ಎಂದು ಹೇಳಿದರು.

ಬಳ್ಳಾರಿ ವಲಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಜನರ ವಿಶ್ವಾಸ ಉಳಿಸುವುದೇ ತಮ್ಮ ಮೊದಲ ಆದ್ಯತೆ ಎಂದು ನೂತನ ಐಜಿ ಡಾ. ಹರ್ಷ ಪಿ.ಎಸ್. ಪುನರುಚ್ಚರಿಸಿದರು.

Previous articleಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಕ್ಯಾ. ಬ್ರಿಜೇಶ್ ಚೌಟ ತೀವ್ರ ಖಂಡನೆ