Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ...

ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್

0
5

ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ನಡೆದ ವಾಗ್ವಾದ ಮತ್ತು ಗಲಾಟೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲಕುಂಟ್ಲ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಅವರನ್ನು ಬಂಧಿಸಲು ತೆರಳಿದ ಸಂದರ್ಭದಲ್ಲಿ ಗಂಭೀರ ಆರೋಪಗಳು ಕೇಳಿಬಂದಿವೆ.

ಬಂಧನದ ವೇಳೆ ಪೊಲೀಸ್ ವ್ಯಾನ್‌ನಲ್ಲೇ ಮಹಿಳಾ ಪೊಲೀಸರು ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ

ಘಟನೆ ಜ.5ರಂದು ತಡರಾತ್ರಿ ನಡೆದಿದೆ ಎಂದು ತಿಳಿದುಬಂದಿದೆ. ವೈರಲ್ ವೀಡಿಯೊ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಕಾರ್ಯಾಚರಣೆಯ ಕುರಿತು ಪ್ರಶ್ನೆಗಳು ಎದ್ದಿವೆ.

ಪೊಲೀಸ್ ಕಮೀಶನರ್ ಸ್ಪಷ್ಟನೆ: ಈ ಕುರಿತು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್ ಕಮೀಶನರ್ ಎನ್. ಶಶಿಕುಮಾರ್ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಆಧಾರದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯನ್ನು ಬಂಧಿಸಲು ತೆರಳಿದಾಗ, ಆಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಚಂದ್ರಶೇಖರ್ ಉಡುಪ ನಿಧನ

ಬಂಧನಕ್ಕೆ ಮುಂದಾದ ವೇಳೆ ಆರೋಪಿತ ಮಹಿಳೆ ತಾನೇ ತನ್ನ ಬಟ್ಟೆ ಬಿಚ್ಚಿಕೊಂಡು ಗೊಂದಲ ಸೃಷ್ಟಿಸಿದ್ದಾಳೆ. ಅಲ್ಲದೇ, ಬಂಧಿಸಲು ಹೋದ ನಾಲ್ಕು ಮಹಿಳಾ ಪೊಲೀಸರ ಕೈ ಮತ್ತು ಹೊಟ್ಟೆಗೆ ಕಚ್ಚಿದ್ದು, ಪುರುಷ ಪೊಲೀಸ್ ಸಿಬ್ಬಂದಿಗೂ ಕಚ್ಚಿದ್ದಾಳೆ ಎಂದು ಕಮೀಶನರ್ ಹೇಳಿದ್ದಾರೆ.

ಆರೋಪಿತ ಮಹಿಳೆ ವಿರುದ್ಧ ಈಗಾಗಲೇ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿವೆ. ಪ್ರಕರಣ ದಾಖಲಾದಾಗ ಇದೇ ರೀತಿಯ ವರ್ತನೆ ತೋರುವುದೇ ಆಕೆಯ ಚಾಳಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆ ಕೇಶ್ವಾಪುರ ಠಾಣೆ ಪೊಲೀಸರು ಹೆಚ್ಚಿನ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಎಸಿಪಿಯವರಿಗೆ ಮಾಹಿತಿ ನೀಡಿ, ನಂತರ ಹೆಚ್ಚಿನ ಸಿಬ್ಬಂದಿಯೊಂದಿಗೆ ತೆರಳಿ ಬಂಧನ ಕಾರ್ಯಾಚರಣೆ ನಡೆಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಬಾಲಕನ AI ಜ್ಞಾನಕ್ಕೆ ಬೆರಗಾದ ಶಶಿ ತರೂರ್‌

ಕಚ್ಚಿದ ಪರಿಣಾಮ ಗಾಯಗೊಂಡ ಮಹಿಳಾ ಪೊಲೀಸ್ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿತ ಮಹಿಳೆಯನ್ನೂ ಮೆಡಿಕಲ್ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಮೀಶನರ್ ತಿಳಿಸಿದ್ದಾರೆ.

ವೀಡಿಯೊವನ್ನು ಯಾರು ಚಿತ್ರೀಕರಿಸಿದರು ಮತ್ತು ಅದು ಹೇಗೆ ವೈರಲ್ ಆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ: ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ, “ಮಹಿಳೆಯನ್ನು ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿ ಬಂಧಿಸಲಾಗಿದೆ. ತಡರಾತ್ರಿ ಬಂಧನಕ್ಕೆ ತೆರಳುವ ಅಗತ್ಯವೇನು ಇತ್ತು? ಆಕೆ ಬಟ್ಟೆ ಬಿಚ್ಚಲು ಪ್ರಯತ್ನಿಸಿದಾಗ ಪೊಲೀಸರು ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: KPS ಶಿಕ್ಷಣಕ್ಕೆ ಸಂಜೀವಿನಿಯೋ? ಹಳ್ಳಿ ಶಾಲೆಗೆ ಮರಣಶಾಸನವೋ?

“ಇದು ಆಕೆ ತಾನೇ ಬಟ್ಟೆ ಬಿಚ್ಚಿಕೊಂಡದ್ದಲ್ಲ, ಪೊಲೀಸರೇ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಕಾರಣರಾದ ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಪಕ್ಷದ ಕಾರ್ಯಕರ್ತೆಗೆ ಆದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.

ಬಿಜೆಪಿ ಪ್ರತಿಭಟನೆ ಘೋಷಣೆ: ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಬಿಜೆಪಿ ಕಾರ್ಯಕರ್ತೆಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಖಂಡಿಸಿ, ಮಧ್ಯಾಹ್ನ 2 ಗಂಟೆಗೆ ಕೇಶ್ವಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.