ಆಡಂಬರದ ಶ್ರೀಮಂತಿಕೆ ಬೇಡ: ಗಂಧದ ನಾಡು ಗಾಂಜಾ ಬೀಡಾಗಿದೆ –
ಬಳ್ಳಾರಿ: “ದೇಶದಲ್ಲಿ ಕಾಂಗ್ರೆಸ್‌ಗಿಂತ ದೊಡ್ಡ ನಾಟಕ ಕಂಪನಿ ಇನ್ನೊಂದಿಲ್ಲ. ಅದರ ಚೇರಮನ್ ಡಿಸಿಎಂ ಡಿ.ಕೆ. ಶಿವಕುಮಾರ್” ಎಂದು ರಾಜ್ಯ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, “ಗೃಹ ಸಚಿವರು ಪಾರ್ಟ್‌ಟೈಂ ಮಂತ್ರಿಯಾಗಿದ್ದಾರೆ. ಉಳಿದ ಶಾಸಕರು ಮತ್ತು ಸಚಿವರೆಲ್ಲ ಗೃಹ ಸಚಿವರಂತೆ ವರ್ತಿಸುತ್ತಿದ್ದಾರೆ” ಎಂದು ಟೀಕಿಸಿದರು.
ಇದನ್ನೂ ಓದಿ: 45 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ದುರ್ಘಟನೆ ನೋಡಿಲ್ಲ
ರಾಜ್ಯದಲ್ಲಿ ಅಪರಾಧಗಳು ಮಿತಿಮೀರಿವೆ ಎಂದು ಆರೋಪಿಸಿದ ನಾರಾಯಣಸ್ವಾಮಿ, “ಗುಂಡು, ಪಿಸ್ತೂಲ್, ಗೂಂಡಾಗಳು, ಕೊಲೆಗಳು ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆಯುತ್ತಿವೆ. ಆದರೆ ಪ್ರತಿಯೊಂದು ಪ್ರಕರಣಕ್ಕೂ ಬಿಜೆಪಿ ಮೇಲೆ ಆರೋಪ ಮಾಡಲಾಗುತ್ತಿದೆ” ಎಂದು ಕಿಡಿಕಾರಿದರು.
‘ನೈತಿಕತೆ ಇದ್ದರೆ ಶಾಸಕರನ್ನು ವಜಾಗೊಳಿಸಲಿ’: ಬಳ್ಳಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷ ಸಂಬಂಧಿಸಿದ ಶಾಸಕರನ್ನು ತಕ್ಷಣವೇ ವಜಾಗೊಳಿಸಬೇಕು. ಈ ಎಲ್ಲ ಘಟನೆಗಳ ಹೊಣೆಗಾರಿಕೆ ಸರ್ಕಾರವೇ ಹೊತ್ತು, ತಪ್ಪಿತಸ್ಥ ಶಾಸಕರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.
‘ಗಂಧದ ನಾಡು ಗಾಂಜಾ ಬೀಡಾಗಿದೆ’: ಕರ್ನಾಟಕದ ಸ್ಥಿತಿಗತಿಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಒಂದು ಕಾಲದಲ್ಲಿ ಗಂಧದ ನಾಡು ಎಂದೇ ಹೆಸರಾದ ಕರ್ನಾಟಕ ಇಂದು ಗಾಂಜಾ ಬೀಡಾಗಿ ಮಾರ್ಪಟ್ಟಿದೆ. ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ” ಎಂದರು.
ಇದನ್ನೂ ಓದಿ: ಬಳ್ಳಾರಿ ಫೈರಿಂಗ್ ಪ್ರಕರಣ: ರಾಜಶೇಖರ್ಗೆ ತಗುಲಿದ್ದ ಖಾಸಗಿ ಬುಲೆಟ್?
ಕೆಪಿಸಿಸಿ ಸಮಿತಿಯ ಮೇಲೂ ಟೀಕೆ: ಕೆಪಿಸಿಸಿ ರಚಿಸಿರುವ ಸತ್ಯ ಶೋಧನ ಸಮಿತಿಯನ್ನೂ ಟೀಕಿಸಿದ ಅವರು, “ಅದು ಸತ್ಯ ಶೋಧನ ಸಮಿತಿ ಅಲ್ಲ, ಸತ್ಯ ಮುಚ್ಚಿಡುವ ಶೋಧ ಸಮಿತಿ” ಎಂದು ಆಕ್ಷೇಪ ವ್ಯಕ್ತಪಡಿಸಿದರು. “ಶಾಸಕರು ಸಾವಿರ ಜನರನ್ನು ಹಿಂಬಾಲಿಸಿಕೊಂಡು ಬಂದಿದ್ದಾಗಿ, ಐದು-ಆರು ಸಾವಿರ ಜನರನ್ನು ಕರೆದುಕೊಂಡು ಬಂದಿದ್ದಾಗಿ ಹೇಳಲಾಗುತ್ತಿದೆ. ಆದರೆ ಪ್ರಕರಣ ಮಾತ್ರ ಸಾವಿರ ಜನರ ವಿರುದ್ಧ ದಾಖಲಿಸಲಾಗಿದೆ. ಇದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
‘ಆಡಂಬರದ ಶ್ರೀಮಂತಿಕೆ ಬೇಡ’: ರಾಜಕೀಯದ ಬಗ್ಗೆ ಮಾತನಾಡಿದ ಅವರು, “ಹೃದಯ ಶ್ರೀಮಂತಿಕೆ ಮಾಡಬೇಕು. ಆಡಂಬರದ ಶ್ರೀಮಂತಿಕೆ ಮಾಡಬಾರದು. ಗುಂಡು ಹೊಡೆದು, ಗೂಂಡಾಗಿರಿ ಮಾಡಲು ರಾಜಕಾರಣಕ್ಕೆ ಬರಬಾರದು” ಎಂದು ಸಲಹೆ ನೀಡಿದರು.
‘ಗುಂಡಿನ ರಾಜಕೀಯ ಬಳ್ಳಾರಿಯಲ್ಲಿ ನೇರವಾಗಿ ಕಾಣಿಸುತ್ತದೆ’: “ಗುಂಡಿನ ಹೊಡೆತ ಸಿನಿಮಾಗಳಲ್ಲಿ ನೋಡಿದ್ದೆವು. ನೇರವಾಗಿ ನೋಡಬೇಕಾದರೆ ಬಳ್ಳಾರಿಗೆ ಬರಬೇಕು” ಎಂದು ವ್ಯಂಗ್ಯವಾಡಿದ ಅವರು, ರಾಜ್ಯದಲ್ಲಿ ಗುಂಡು ಸಂಸ್ಕೃತಿ ಹೆಚ್ಚುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.





















