ಆರ್‌ಇಸಿ ಸಭೆಯಲ್ಲಿ ಸಿಗದ ಗ್ರೀನ್ ಸಿಗ್ನಲ್ | ಬಂಡೂರಿ ನಾಲಾಕ್ಕೆ ನೀರು ತಿರುಗಿಸುವ ರಾಜ್ಯದ ಪ್ರಸ್ತಾವಕ್ಕೆ ಹಿನ್ನಡೆ
ಬಿ.ಅರವಿಂದ
ಹುಬ್ಬಳ್ಳಿ: ಮಹದಾಯಿ ಯೋಜನೆಯ ಬಂಡೂರಿ ನಾಲಾ ತಿರುವಿಗೆ ಈಗ ವಿಘ್ನ ಎದುರಾಗಿದೆ. ಕೇಂದ್ರ ಪರಿಸರ ಖಾತೆಯ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಆರ್‌ಇಸಿ) ಬಂಡೂರಿ ನಾಲಾಕ್ಕೆ ಮಹದಾಯಿ ನೀರು ತಿರುಗಿಸಿಕೊಳ್ಳುವ ರಾಜ್ಯದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿಲ್ಲ. ಡಿಸೆಂಬರ್ 12ರಂದು (2025) ನಡೆದಿದ್ದ ಆರ್‌ಇಸಿ ಸಭೆಯ ನಡಾವಳಿಗಳ ಮಾಹಿತಿ ಶುಕ್ರವಾರ ಸಂಜೆ ಬಿಡುಗಡೆಯಾಗಿ, ಈ ಮಾಹಿತಿ ಹೊರಬಿದ್ದಿದೆ. ಬಂಡೂರಿಗೆ ಆರ್‌ಇಸಿ ಒಪ್ಪಿಗೆ ನೀಡುವ ನಿರೀಕ್ಷೆ ಇತ್ತು.
ಬಂಡೂರಿಗೆ 71 ಎಕರೆ ಅರಣ್ಯ ಮಾತ್ರ ಬಳಕೆ ಮಾಡಿಕೊಳ್ಳುತ್ತೇವೆ. ಜೊತೆಗೆ ಗೋವಾ ಅಥವಾ ಕರ್ನಾಟಕದ ವ್ಯಾಪ್ತಿಯ ಅರಣ್ಯದಲ್ಲಿ ಯಾವುದೇ ಜಲಾಶಯವನ್ನು ನಿರ್ಮಿಸುವುದಿಲ್ಲ. ಕೇವಲ ಲಿಫ್ಟ್ ಮಾಡಿ (ಪಂಪ್‌ನಿಂದ ಎತ್ತುವಳಿ ಮೂಲಕ) ನೀರನ್ನು ರಾಜ್ಯದ ಮಲಪ್ರಭಾ ನದಿಗೆ ಸೇರಿಸಿಕೊಳ್ಳುತ್ತವೆ ಎಂಬುದಾಗಿ ಸರ್ಕಾರ ಆರ್‌ಇಸಿಗೆ ಪ್ರಸ್ತಾವನೆ ಸಲ್ಲಿಸಿತ್ತು.
ಇದನ್ನೂ ಓದಿ: 45 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ದುರ್ಘಟನೆ ನೋಡಿಲ್ಲ
ಆರ್‌ಇಸಿ ಕರ್ನಾಟಕದ ಪರ ನಿಲುವು ತೆಗೆದುಕೊಳ್ಳದೇ ಇರುವುದಕ್ಕೆ ಮೂಲ ಕಾರಣ, ಉತ್ತರ ಕರ್ನಾಟಕದ ನಾಗರಿಕನ್ನು ಸಂರಕ್ಷಿಸಿ ಎಂಬ `ಧ್ಯೇಯ’ ವಾಕ್ಯದ ಸರ್ಕಾರೇತರ ಸಂಸ್ಥೆಯ ವರದಿ ಎನ್ನಲಾಗುತ್ತಿದೆ !
ಬಂಡೂರಿ ನಾಲಾ ಕಾಮಗಾರಿಗೆ ಒಪ್ಪಿಗೆ ನೀಡಿದಲ್ಲಿ, ದಟ್ಟ ಅರಣ್ಯ ಹಾಳಾಗುತ್ತದೆ. ಪಂಪ್‌ಗಳನ್ನು ಅಳವಡಿಸಿ ನೀರನ್ನು ಎತ್ತುವಳಿ ಮಾಡಿಕೊಳ್ಳುವುದು ಅರಣ್ಯದ ಬುಡವನ್ನು ಸಡಿಲಮಾಡುತ್ತದೆ. ಒಟ್ಟಾರೆ ಅರಣ್ಯೀಕರಣಕ್ಕೆ ಧಕ್ಕೆಯಾಗಿ, ಮರುಭೂಮಿಕರಣ ವೇಗ ಪಡೆಯುತ್ತದೆ. ಇದೆಲ್ಲವುಗಳ ಜೊತೆಗೆ ಗೋವಾದ ಭೀಮಗಡ ವ್ಯಾಪ್ತಿಯ ಹುಲಿ ರಕ್ಷಿತ ಅರಣ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂಬುದಾಗಿ ಸಂಸ್ಥೆ ವರದಿ ಸಲ್ಲಿಸಿತ್ತು.
ಇದಕ್ಕೆ ಪೂರಕವಾಗಿ ಆರ್‌ಇಸಿ ತಂಡ ಬಂಡೂರಿ ಪ್ರದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಶಾಸ್ತçವೂ ಸೇರಿಕೊಂಡಿತು. ಎಲ್ಲದರ ಪರಿಣಾಮವಾಗಿ ಡಿಸೆಂಬರ್ 12ರ ಸಭೆಯಲ್ಲಿ, ಬಂಡೂರಿಗೆ ಒಪ್ಪಿಗೆ ನೀಡದಿರಲು ತೀರ್ಮಾನಿಸಲಾಯಿತು. 1972ರ ವನ್ಯಜೀವಿ ಕಾಯ್ದೆ, 1980ರ ಅರಣ್ಯ ಕಾಯ್ದೆ ಹಾಗೂ 1982ರ ಪರಿಸರ ಸಂರಕ್ಷಣಾ ಕಾಯ್ದೆಗಳ ಅನ್ವಯ ಬಂಡೂರಿಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂಬುದು ಆರ್‌ಇಸಿ ಸಭೆಯ ನಿಲುವಾಗಿತ್ತು ಎಂದು ಮೂಲವೊಂದು ಸಂಯುಕ್ತ ಕರ್ನಾಟಕಕ್ಕೆ ಹೇಳಿದೆ.
ಇದನ್ನೂ ಓದಿ: ಬಳ್ಳಾರಿ ಫೈರಿಂಗ್ ಪ್ರಕರಣ: ರಾಜಶೇಖರ್ಗೆ ತಗುಲಿದ್ದ ಖಾಸಗಿ ಬುಲೆಟ್?
ವಿದ್ಯುತ್ ಮಾರ್ಗ ಬೇಕು; ಕುಡಿಯುವ ನೀರು ಬೇಡ!: ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಯನ್ನು ಸೌಜನ್ಯಯುತವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಕೇಂದ್ರದ ಮಹತ್ವಾಕಾಂಕ್ಷಿ `ತಮ್ನಾರ್- ಗೋವಾ’ ವಿದ್ಯುತ್ ಮಾರ್ಗಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಮಹದಾಯಿಗೆ ಗೋವಾ ಮತ್ತು ಕೇಂದ್ರ ಪರಿಸರ ಇಲಾಖೆಗಳು ಸಹಕಾರ ನೀಡುವ ಸದಾಶಯದ ಹಿನ್ನೆಲೆ ಈ ಕ್ರಮ ಎಂದು ಸರ್ಕಾರವೇನೋ ಹೇಳಿದೆ.
ಆದರೆ ಇತ್ತ ರಾಜ್ಯದ ಈ ಸನ್ನಡತೆಯ ಕ್ರಮ ಕಂಡು ಬಂದರೆ, ಅತ್ತ ಗೋವಾದಲ್ಲಿ ಎನ್‌ಜಿಓ ಒಂದು ಪುನಃ ಭೀಮಗಡದ ಹುಲಿ ಸಂರಕ್ಷಿತ ಧಾಮಕ್ಕೆ ತೊಂದರೆಯಾಗಲಿದೆ ಎನ್ನುವ ದೂರನ್ನು ಅಲ್ಲಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಿದೆ. ಮೋದಿಯವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರದ ನಡೆಗೆ ಗೋವಾದ ಸರ್ಕಾರ, ಅಲ್ಲಿನ ಕಾಂಗ್ರೆಸ್ ನಾಯಕರು ಹಾಗೂ ಎನ್‌ಜಿಓಗಳೂ ಕೂಡ ಇದೇ ರೀತಿ ಸದ್ವರ್ತನೆ ತೋರಬೇಕಲ್ಲವೇ?
ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ
ತಮ್ನಾರ್-ಗೋವಾ ವಿದ್ಯುತ್ ಮಾರ್ಗಕ್ಕೆ ರಾಜ್ಯ ವ್ಯಾಪ್ತಿಯ ಅನುಮತಿ ನೀಡುವುದಕ್ಕೆ ಇನ್ನಷ್ಟು ಸಮಯವನ್ನು ರಾಜ್ಯ ತೆಗೆದುಕೊಳ್ಳಬೇಕಾಗಿತ್ತಲ್ಲವೇ? ತಾನೇ ಮುಂದಾಗಿ ಸನ್ನಡತೆ ಪ್ರದರ್ಶಿಸಿದ ರಾಜ್ಯ ಬಂಡೂರಿಗೆ ಹಿನ್ನಡೆಯಾಗಿರುವುದಕ್ಕೆ ಈಗ ಹೇಗೆ ಪ್ರತಿಕ್ರಿಯಿಸಲಿದೆ? ಎನ್ನುವ ಪ್ರಶ್ನೆಗಳು ಹೋರಾಟಗಾರರಲ್ಲಿ ಮೂಡಿವೆ.
ಬಂಡೂರಿಗೆ ಎಷ್ಟು ಬೇಕಿದೆ?: ಮಹದಾಯಿಯಿಂದ ಬಂಡೂರಿಗೆ 2.18 ಟಿಎಂಸಿ ಅಡಿ ಹರಿಸಿಕೊಂಡು ಮಲಪ್ರಭಾಕ್ಕೆ ಸೇರಿಸಬೇಕಿದೆ. 1.72 ಟಿಎಂಸಿ ಅಡಿ ಕಳಸಾ ನಾಲೆಗೆ ಸೇರಬೇಕೆಂದು ಮಹದಾಯಿ ನ್ಯಾಯಾಧಿಕರಣ ಹೇಳಿದೆ. ಯೋಜನೆಯಲ್ಲಿ ಕರ್ನಾಟಕಕ್ಕೆ ಒಟ್ಟು 13.42 ಟಿಎಂಸಿ ಅಡಿ ನೀರು ಮಂಜೂರಾಗಿದೆ. ಈ ಪೈಕಿ 5.5 ಟಿಎಂಸಿ ಅಡಿ ರಾಜ್ಯದ ಕುಡಿಯುವ ನೀರಿಗೆ ಹಂಚಿಕೆಯಾಗಿದೆ.
ಬಂಡೂರಿಗೆ ಇಂತಹ ವಿಘ್ನ ಎದುರಾಗಿದ್ದರೆ, ಕಳಸಾ ನಾಲೆ ಕುರಿತಂತೆ ವನ್ಯಜೀವಿ ಮಂಡಳಿಯಲ್ಲಿರುವ ಅರ್ಜಿ ಕಳೆದ ಒಂದು ವರ್ಷದಿಂದ ಚರ್ಚೆಗೇ ಬಂದಿಲ್ಲ! ಪರಿಣಾಮವಾಗಿ ಯೋಜನೆಯ ಎರಡೂ ನಾಲೆಗಳ ಕಾಮಗಾರಿಗೆ ಒಪ್ಪಿಗೆ ದೊರೆಯದೇ ರಾಜ್ಯ ಪ್ರಹಾರವನ್ನು ಅನುಭವಿಸುತ್ತಿದೆ.
ಇದನ್ನೂ ಓದಿ: ಯಲ್ಲಾಪುರ: ಮಹಿಳೆಯ ಕೊಲೆ ಮಾಡಿ ಪರಾರಿಯಾಗಿದ್ದ ರಫಿಕ್ ಆತ್ಮಹತ್ಯೆ
ಆರ್‌ಇಸಿ ರಾಜಕೀಯ: ಆರ್‌ಇಸಿ ರಾಜಕೀಯ ಶಕ್ತಿಗಳ ಹಿಡಿತ ಕ್ಕೆ ಸಿಲುಕಿ, ಕರ್ನಾಟಕಕ್ಕೆ ಉದ್ದೇಶ ಪೂರ್ವಕ ಅನ್ಯಾಯ ಮಾಡುತ್ತಿದೆ. ರಾಜ್ಯ ವನ್ಯಜೀವಿ ಪ್ರಧಾನ ವಾರ್ಡನ್ ಅನುಮತಿ ನೀಡಿದ ಮೇಲೆ ಕೇಂದ್ರ ವನ್ಯಜೀವಿ ಮಂಡಳಿ ಅಡ್ಡಿ ಹಾಕುತ್ತಿದೆ. ಇದೆಲ್ಲ ಏನನ್ನು ತೋರಿಸುತ್ತದೆ? ಕರ್ನಾಟಕದ ವಿರುದ್ಧ ಎನ್‌ಜಿಓಗಳಿಗೆ ಕುಮ್ಮಕ್ಕು ನೀಡಿ, ಆರ್‌ಇಸಿ ಬಳಸಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರೈತ ಸೇನೆ ರಾಜ್ಯ ಅಧ್ಯಕ್ಷ ಶಂಕರ ಅಂಬಲಿ ಹೇಳಿದ್ದಾರೆ.
ಸಂಸದರೇಕೆ ಮೌನ? – ಜನರ ಪ್ರಶ್ನೆ: ಮಹದಾಯಿ ಯೋಜನೆಯ ಬಂಡೂರಿ ತಿರುವಿಗೆ ಏಕೆ ಅಡ್ಡಿ ಮಾಡಲಾಗುತ್ತಿದೆ? ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ನೀಡುವಲ್ಲಿ ಅರಣ್ಯ, ಸೂಕ್ಷö್ಮಜೀವಿ ಪರಿಸರ ಇಲಾಖೆ ಹಾಗೂ ವನ್ಯಜೀವಿ ಮಂಡಳಿಗಳು ತೋರುವ ತರಾತುರಿ ಮಹದಾಯಿಗೆ ಏಕಿಲ್ಲ? ಒಂದು ವರ್ಷದಿಂದ ವನ್ಯಜೀವಿ ಮಂಡಳಿ ಸಭೆಯಲ್ಲಿ ವಿಷಯವನ್ನೇ ಕೈಗೆತ್ತಿಕೊಂಡಿಲ್ಲ ಏಕೆ? ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪಿ.ಸಿ.ಗದ್ದೀಗೌಡರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಎಲ್ಲರೂ ಕಳಸಾ-ಬಂಡೂರಿ ಪ್ರಶ್ನೆ ಬಂದಾಗ ಮೌನ ವಹಿಸಿರುವುದೇಕೆ ಎಂದು ಉತ್ತರ ಕರ್ನಾಟಕ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.
ರಾಜ್ಯ, ಕೇಂದ್ರದ ವಿರುದ್ಧ ಹೋರಾಟ: ಬಂಡೂರಿಗೆ ಅನುಮತಿಸಲು ಯಾವುದೇ ಅಡ್ಡಿ ಇಲ್ಲದಿದ್ದರೂ ಅನ್ಯಾಯ ಮಾಡಿರುವುದನ್ನು ಪ್ರಶ್ನಿಸಿ, ನ್ಯಾಯಾಲಯದ ಹೋರಾಟವೊಂದೇ ಉಳಿದ ದಾರಿ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಹೈಕೋರ್ಟ್ ಮೆಟ್ಟಿಲೇರುವಂತೆ ಕೋರುತ್ತೇವೆ. ಸರ್ಕಾರ ಹಿಂಜರಿದರೆ ನಾವು ಜನವರಿ 5ರ ನಂತರ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇವೆ. ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ಮಹದಾಯಿ ಹೋರಾಟಗಾರ ವೀರೇಶ ಸೊಬರದಮಠ ಹೇಳಿದ್ದಾರೆ























