ಸಿಎಂ ಗಾಳಿಪಟದ ಬಾಲ ಆಗಿದ್ದಾರೆ, ಯಾವಾಗ ಕಿತ್ತುಕೊಂಡು ಹೋಗ್ತಾರೆ ಗೊತ್ತಿಲ್ಲ
ಬಳ್ಳಾರಿ: ಬಳ್ಳಾರಿಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರು ನಡೆಸಿದ ಸುದ್ದಿಗೋಷ್ಟಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಯಿತು. ಈ ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು, ಸೋಮಲಿಂಗಪ್ಪ, ಮಾಜಿ ಸಂಸದ ಸಣ್ಣ ಫಕೀರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೋಮಣ್ಣ, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಜನವರಿಯಲ್ಲಿ ಕಾಂಗ್ರೆಸ್ ನಾಯಕರು ಕೆಟ್ಟ ಸಂದೇಶ ಕೊಡಲು ಹೋಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಳ್ಳಾರಿ ಜಿಲ್ಲೆಯೇ ಕಾರಣ. ಈ ಜಿಲ್ಲೆಯ ಗಾಂಭೀರ್ಯತೆ, ಇತಿಹಾಸ ಹಾಗೂ ಜನರ ಗೌರವವನ್ನು ಕಾಪಾಡಬೇಕಿದೆ. ನೀವು ಈ ವರ್ಷ ಎಲ್ಲಿ ಇರುತ್ತಿರಿ ಅಂತ ನೋಡಿಕೊಳ್ಳಿ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಳ್ಳಾರಿ ಫೈರಿಂಗ್ ಪ್ರಕರಣ: ರಾಜಶೇಖರ್ಗೆ ತಗುಲಿದ್ದ ಖಾಸಗಿ ಬುಲೆಟ್?
ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವನ್ನು ಕಟುವಾಗಿ ಟೀಕಿಸಿದ ಅವರು, “ರಾಮಾಯಣ ಬರೆದ ಪುಣ್ಯಪುರುಷ ವಾಲ್ಮೀಕಿ ಅವರ ಪುತ್ಥಳಿ ಹೆಸರಲ್ಲಿ ಪಾಪದ ಕೆಲಸ ಮಾಡ್ತಿದ್ದೀರಿ. ಆ ಪಾಪ ನಿಮ್ಮನ್ನು ಬಿಡೋದಿಲ್ಲ. ಪುಣ್ಯಪುರುಷರ ಹೆಸರನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದು” ಎಂದು ಹೇಳಿದರು.
ಸತೀಶ್ ರೆಡ್ಡಿ ಹಾಗೂ ಭರತ್ ರೆಡ್ಡಿ ಹೆಸರು ಉಲ್ಲೇಖಿಸಿ, “ನಾವು ಯಾರು ಇಲ್ಲಿ ಉಳಿಯೋಕೆ ಬಂದಿಲ್ಲ, ಕೆಲಸ ಮಾಡಿಕೊಂಡು ಹೋಗಬೇಕಿದೆ” ಎಂದು ಹೇಳಿದರು. ಶ್ರೀರಾಮುಲು ಕುರಿತು ಮಾತನಾಡಿದ ಸೋಮಣ್ಣ, “ಶ್ರೀರಾಮುಲು ಬರಲಿಲ್ಲ ಅಂದ್ರೆ, ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದ ಪರಿಸ್ಥಿತಿ ಏನಾಗಿರ್ತಿತ್ತು? ನನ್ನ 45 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ದುರ್ಘಟನೆ ನೋಡಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ರಾಜಶೇಖರ ಸಾವಿನ ಪ್ರಕರಣದ ಕುರಿತು ಮಾತನಾಡಿದ ಅವರು, “ಜನಾರ್ದನ ರೆಡ್ಡಿ ಮೇಲೆ ಗುರಿ ಇಟ್ಟು ಹೋದ ದಾಳಿ, ಆ ಹುಡುಗನ ಮೇಲೆ ಬಿದ್ದಿದೆ. ರಾಜಶೇಖರ ಕುಟುಂಬದ ಸ್ಥಿತಿ ನೋವು ತಂದಿದೆ. ಅವರ ಕುಟುಂಬದ ಜೊತೆ ನಾನು ಮಾತನಾಡಿದ್ದೇನೆ” ಎಂದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
“ಬಳ್ಳಾರಿಯಲ್ಲಿ ದುರ್ಗಮ್ಮ ದೇವಿಯ ರೂಪದಲ್ಲಿ ಶ್ರೀರಾಮುಲು ಬಂದಿದ್ದಾರೆ. ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಬೇಡಿ. ನೀವು ಮಾಡಿರೋ ಪಾಪ ನಿಮಗೆ ಸುತ್ತುತ್ತದೆ” ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು. ಇಂತಹ ಜನರಿಗೆ ಆದ್ಯತೆ ಕೊಟ್ಟರೆ ಸರ್ಕಾರಕ್ಕೇ ಮುಳ್ಳಾಗುತ್ತದೆ ಎಂದರು.
ಇದನ್ನೂ ಓದಿ: ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಸೋಮಣ್ಣ, “ಕೆಟ್ಟ ವ್ಯವಸ್ಥೆ ಸೃಷ್ಟಿ ಮಾಡೋರಿಗೆ ಅವಕಾಶ ಕೊಡಬಾರದು. ಇನ್ನೂ ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ” ಎಂದು ಭವಿಷ್ಯವಾಣಿ ಮಾಡಿದರು.
ಆಡಳಿತದ ಮೇಲೆ ಗಂಭೀರ ಆರೋಪ ಮಾಡಿದ ಅವರು, “RCB ಘಟನೆಯಲ್ಲಿ ದಯಾನಂದರನ್ನು ಬಲಿ ಕೊಟ್ಟಿರಿ, ಇಲ್ಲಿ ಎಸ್‌ಪಿ ಅವರನ್ನು ಬಲಿ ಕೊಟ್ಟಿರಿ. ಸಿಎಂ ಸಿದ್ದರಾಮಯ್ಯಗೆ ಮೂರು ಕಾಸಿನ ಮರ್ಯಾದೆ ಕೊಡ್ತಿಲ್ಲ. ಅವರು ಗಾಳಿಪಟದ ಬಾಲ ಆಗಿದ್ದಾರೆ, ಯಾವಾಗ ಕಿತ್ತುಕೊಂಡು ಹೋಗ್ತಾರೆ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದರು.
ಭರತ್ ರೆಡ್ಡಿ ಕುರಿತು ಮಾತನಾಡುತ್ತಾ, “ನಾನು ಭರತ್ ರೆಡ್ಡಿಯನ್ನು ನನ್ನ ಬಳಿ ಕರೀತೀನಿ, ಆರು ತಿಂಗಳು ಟ್ರೈನಿಂಗ್‌ಗೆ ಬಾ ಅಂತೀನಿ” ಎಂದರು. ಗೃಹ ಸಚಿವರ ಬಗ್ಗೆ ಮಾತನಾಡಿ, “ಅವರು ಅಮಾಯಕರು, ಪಾಪ ಏನು ನಡೆಯುತ್ತಿಲ್ಲ” ಎಂದು ಹೇಳಿದರು.
ದ್ವೇಷ ಭಾಷಣ ಮಸೂದೆ ಜಾರಿಯ ಕುರಿತು ಪ್ರಶ್ನಿಸಿದ ಅವರು, “ಆ ಮಸೂದೆ ಅಡಿಯಲ್ಲಿ ಯಾಕೆ ಕೆಲವರನ್ನು ಅರೆಸ್ಟ್ ಮಾಡಿಲ್ಲ? ಅವರ ಭಾಷೆ ನೋಡಿದ್ದೇನೆ, ಇಂತಹ ಮಾತುಗಳು ನಾನು ಯಾವತ್ತೂ ನೋಡಿಲ್ಲ. ಯಾವ ಸ್ಕೂಲ್‌ನಲ್ಲಿ ಓದಿದ್ದಾನೋ ಗೊತ್ತಿಲ್ಲ” ಎಂದು ಕಿಡಿಕಾರಿದರು.
“ಶ್ರೀರಾಮುಲು ಮೇಲೆ ಎಗರೋಕೆ ಹೋದ್ರೆ ಕಷ್ಟ. ಅವರು ತುಂಬಾ ತಾಳ್ಮೆಯಿಂದಿದ್ದಾರೆ. ಸಿದ್ದರಾಮಯ್ಯಗೆ ಕೇವಲ ಕುರ್ಚಿ ಉಳಿಸಿಕೊಳ್ಳಬೇಕಿದೆ” ಎಂದು ಹೇಳಿದರು. ಇದೇ ವೇಳೆ, “ಇಂತಹ ಭಾಷೆ ಬಳಸಿದ 500 ಜನರ ಹೆಸರು ಹೇಳಬಲ್ಲೆ, ಅವರೆಲ್ಲ ಇಂದು ಇಲ್ಲದ ಹಾಗೆ ಹೋಗಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
ಪ್ರಕರಣದ ತನಿಖೆಯನ್ನು CBIಗೆ ಅಥವಾ ಸಿಟ್ಟಿಂಗ್ ಜಡ್ಜ್‌ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ಸೋಮಣ್ಣ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಮನವಿ ಮಾಡಿ, “ಇಂತಹ ಪಾಪದ ಕೆಲಸಕ್ಕೆ ಕೈಜೋಡಿಸಬಾರದು” ಎಂದರು.
“ಜನಾರ್ದನ ರೆಡ್ಡಿ ಬಂದ ಮೇಲೆ ಬಳ್ಳಾರಿಯಲ್ಲಿ ಗಲಾಟೆ ಎಂಬುದು ಸುಳ್ಳು. ಅವರಿಗೆ ತಮ್ಮದೇ ಆದ ಇತಿಹಾಸವಿದೆ. ಶ್ರೀರಾಮುಲು–ಜನಾರ್ದನ ರೆಡ್ಡಿ ಒಂದಾಗಿದ್ರೆ ನೀವು ಯಾಕೆ ಬರ್ತಿದ್ದಿರಿ?” ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.





















