ಬಳ್ಳಾರಿ: ತನಗೆ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಎದುರಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಗಣಿಗಾರಿಕೆ ಉದ್ಯಮಿ ಗಾಲಿ ಜನಾರ್ದನರೆಡ್ಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ. ತಮ್ಮ ಹಾಗೂ ಕುಟುಂಬದ ಸುರಕ್ಷತೆಗೆ ತಕ್ಷಣ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಕೇಂದ್ರ ಗೃಹಮಂತ್ರಿ ಅಮಿತ್ ಶಾ, ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಗೃಹಮಂತ್ರಿ ಡಾ. ಜಿ. ಪರಮೇಶ್ವರ, ಹಾಗೂ ಡಿಜಿ & ಐಜಿ ಸಲೀಂ ಅವರಿಗೆ ಪ್ರತ್ಯೇಕ ಪತ್ರಗಳನ್ನು ರವಾನಿಸಿದ್ದಾರೆ.
ಇದನ್ನೂ ಓದಿ: 3 ತಿಂಗಳಲ್ಲಿ ಮೂರು ಬಾರಿ ಬದಲಾವಣೆ: ಮಕ್ಕಳಾಟವಾದ ಅಧ್ಯಕ್ಷ ಸ್ಥಾನ!
ಪತ್ರದಲ್ಲಿ ಉಲ್ಲೇಖಿಸಿರುವಂತೆ, ಜನವರಿ 1ರಂದು ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಕಾಂಗ್ರೆಸ್ ಶಾಸಕ ನಾರಾ ಭರತರೆಡ್ಡಿ ಮತ್ತು ಆತನ ಬೆಂಬಲಿಗರು ದಾಳಿ ನಡೆಸಿದ್ದಾರೆ ಎಂದು ಗಾಲಿ ಜನಾರ್ದನರೆಡ್ಡಿ ಆರೋಪಿಸಿದ್ದಾರೆ. ನಾರಾ ಭರತರೆಡ್ಡಿ ಮತ್ತು ಸತೀಶರೆಡ್ಡಿ ಅವರ ಕಡೆಯಿಂದಲೇ ಪೆಟ್ರೋಲ್ ಬಾಂಬ್ ದಾಳಿ ನಡೆದಿದ್ದು, ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಲಾಗಿದೆ ಎಂದು ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಈ ದಾಳಿಯಿಂದಾಗಿ ತಮ್ಮ ಜೀವಕ್ಕೆ ಮಾತ್ರವಲ್ಲದೆ ಕುಟುಂಬದ ಸದಸ್ಯರಿಗೂ ತೀವ್ರ ಅಪಾಯ ಎದುರಾಗಿದೆ ಎಂದು ರೆಡ್ಡಿ ತಿಳಿಸಿದ್ದಾರೆ. ಶಾಸಕರಿಂದಲೇ ಈ ರೀತಿಯ ಅಪಾಯ ಇರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಹಿಂಸಾತ್ಮಕ ಘಟನೆಗಳು ನಡೆಯುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ
ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ತಕ್ಷಣವೇ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಿ, ತಮ್ಮ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡುವಂತೆ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ. ಈ ಪತ್ರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಬಳ್ಳಾರಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳತ್ತ ಎಲ್ಲರ ಗಮನ ಸೆಳೆದಿದೆ.





















