Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕೋಳಿ ಅಂಕ ವಿಚಾರದಲ್ಲಿ ಬಿಜೆಪಿ ಚಿಲ್ಲರೆ ರಾಜಕೀಯ ಮಾಡುತ್ತಿದೆ

ಕೋಳಿ ಅಂಕ ವಿಚಾರದಲ್ಲಿ ಬಿಜೆಪಿ ಚಿಲ್ಲರೆ ರಾಜಕೀಯ ಮಾಡುತ್ತಿದೆ

0
31

ಮಂಗಳೂರು: ತುಳುನಾಡಿನಲ್ಲಿ ದೈವ–ದೇವಸ್ಥಾನಗಳ ಜಾತ್ರೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ಕೋಳಿ ಅಂಕ ವಿಚಾರವನ್ನು ಮುಂದಿಟ್ಟುಕೊಂಡು ಜಿಲ್ಲೆಯ ಬಿಜೆಪಿ ಶಾಸಕರು ಚಿಲ್ಲರೆ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಹೇಳಿಕೆ ನೀಡಿದ ಅವರು, “ಈ ನೆಲದ ಸಂಸ್ಕೃತಿ, ಪರಂಪರೆ ಬಗ್ಗೆ ಬಿಜೆಪಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಈ ವಿಷಯವನ್ನು ಯಾಕೆ ಚರ್ಚೆ ಮಾಡಲಿಲ್ಲ? ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಿತ್ತಲ್ಲವೇ? ಆದರೆ ಆಗ ಮೌನ ವಹಿಸಿ, ಈಗ ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಮಾತನಾಡುತ್ತಿರುವುದು ಖಂಡನೀಯ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ:  ಮದ್ದಳೆ ಮಾಂತ್ರಿಕ ಕರ್ಕಿ ಪ್ರಭಾಕರ ಭಂಡಾರಿ ನಿಧನ

ದೈವರಾಧನೆ ಮತ್ತು ಸಂಸ್ಕೃತಿಗೆ ರಾಜ್ಯ ಸರ್ಕಾರದ ಬೆಂಬಲ: ತುಳುನಾಡಿನ ದೈವರಾಧನೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಸದಾ ಬೆಂಬಲ ನೀಡುತ್ತಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಕಂಬಳ ಸೇರಿದಂತೆ ಜಾನಪದ ಕ್ರೀಡೆಗಳಿಗೆ ಅನುದಾನ, ದೈವ–ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಹಾಗೂ ಕರಾವಳಿ ಅಭಿವೃದ್ಧಿಗೆ ಸರ್ಕಾರ ಮಹತ್ವದ ಕೊಡುಗೆ ನೀಡುತ್ತಿದೆ ಎಂದರು.

ಜಾತ್ರೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ಅವಕಾಶ ನೀಡುವಂತೆ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಆದರೆ ಕಾನೂನು ಅಡ್ಡಿಯ ಕಾರಣದಿಂದ ಪೊಲೀಸ್ ಅಧಿಕಾರಿಗಳು ಕೋಳಿ ಅಂಕಕ್ಕೆ ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಶೋಭೆಯಲ್ಲ. ಬಿಜೆಪಿಯವರ ಮೌನವೇ ಈ ವಿಚಾರ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ

ಕೆಂಪು ಕಲ್ಲು ಗಣಿಗಾರಿಕೆ ಈಗ ಕ್ರಮಬದ್ಧ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿತ್ತು. ಲಂಗು ಲಗಾಮಿಲ್ಲದೆ ವ್ಯವಹಾರ ನಡೆಯುತ್ತಿದ್ದು, ಸರ್ಕಾರಕ್ಕೂ ಸಮರ್ಪಕ ರಾಜಸ್ವ ಸಂದಾಯವಾಗುತ್ತಿರಲಿಲ್ಲ. ಇದರಿಂದ ಅಕ್ರಮ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತಿತ್ತು ಎಂದು ಹರೀಶ್ ಕುಮಾರ್ ಹೇಳಿದರು.

ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಕ್ರಮಗಳಿಗೆ ಮೂಗುದಾರ ಹಾಕಿ, ಕೆಂಪು ಕಲ್ಲು ಗಣಿಗಾರಿಕೆಯನ್ನು ಕ್ರಮಬದ್ಧಗೊಳಿಸಲಾಗಿದೆ. ಇದೀಗ ಜನರಿಗೆ ಕಾನೂನುಬದ್ಧವಾಗಿ ಮತ್ತು ಸುಲಭವಾಗಿ ಕೆಂಪು ಕಲ್ಲು ಲಭ್ಯವಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ

ಮರಳುಗಾರಿಕೆ ವಿಚಾರದಲ್ಲಿ ಕೇಂದ್ರದ ಹೊಣೆ: ಜಿಲ್ಲೆಯಲ್ಲಿ ಮರಳುಗಾರಿಕೆ ಪರವಾನಗಿ ಸಂಬಂಧಿಸಿದಂತೆ ನಾನ್ ಸಿಆರ್‌ಝೆಡ್ ಮರಳು ಪರವಾನಗಿ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದ್ದು, ಬೇಕಾದಷ್ಟು ಮರಳು ಲಭ್ಯವಾಗುತ್ತಿದೆ ಎಂದರು. ನಾನ್ ಸಿಆರ್‌ಝೆಡ್ ಮರಳುಗಾರಿಕೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಈ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಸಂಸದರು ಹಾಗೂ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಸಿಆರ್‌ಝೆಡ್ ವ್ಯಾಪ್ತಿಯ ಮರಳು ಸಮಸ್ಯೆ ಬಗೆಹರಿದರೆ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಕೇಂದ್ರ ಮಟ್ಟದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಜನರಿಗೆ ಸುಲಭವಾಗಿ ಮರಳು ದೊರಕುವಂತೆ ಮಾಡಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದರು.