ಅದಲು-ಬದಲು ಕಂಚಿ ಕದಲು : ಪಾಟೀಲ್ರು ಹೋದ್ರು.. ಹುಲಜತ್ತಿ ಬಂದ್ರು…!
ರಬಕವಿ–ಬನಹಟ್ಟಿ: ರಬಕವಿ–ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೂರು ತಿಂಗಳೊಳಗೆ ಮೂರು ಬಾರಿ ಕೈಬದಲಾದ ಘಟನೆ ಕಾಂಗ್ರೆಸ್ ಪಕ್ಷದ ಒಳರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪ್ರಾಧಿಕಾರದ ಅಧ್ಯಕ್ಷ ಸ್ಥಾನವೇ ಮಕ್ಕಳಾಟವಾದಂತಾಗಿದೆ.
ಕಳೆದ ಸೆಪ್ಟೆಂಬರ್ 30ರಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ದಾನಪ್ಪ ಹುಲಜತ್ತಿ ಅವರನ್ನು ಬದಲಿಸಿ, ನಂತರದ ಬೆಳವಣಿಗೆಯಲ್ಲಿ ಸುರೇಶ ಪಾಟೀಲ ಅವರು ಡಿಸೆಂಬರ್ 23ರಂದು ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದರು. ಆದರೆ ಈ ನೇಮಕವನ್ನು ಪ್ರಶ್ನಿಸಿ ದಾನಪ್ಪ ಹುಲಜತ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದೀಗ ನ್ಯಾಯಾಲಯದಿಂದ ‘ಯಥಾಸ್ಥಿತಿ’ ಆದೇಶ ದೊರಕಿರುವ ಹಿನ್ನೆಲೆಯಲ್ಲಿ ಶನಿವಾರ ಅವರು ಎರಡನೇ ಬಾರಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಮದ್ದಳೆ ಮಾಂತ್ರಿಕ ಕರ್ಕಿ ಪ್ರಭಾಕರ ಭಂಡಾರಿ ನಿಧನ
ದಿಢೀರ್ ಬದಲಾವಣೆಗಳು – ಕಾಂಗ್ರೆಸ್ ಒಳರಾಜಕೀಯ ತೀವ್ರ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಆರಂಭದಿಂದಲೂ ಕಾಂಗ್ರೆಸ್ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಪಕ್ಷದ ವಿರೋಧದ ನಡುವೆಯೂ ಸೆಪ್ಟೆಂಬರ್ 30ರಂದು ದಾನಪ್ಪ ಹುಲಜತ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ನಂತರ ಕ್ಷೇತ್ರದ ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಒಮ್ಮತದ ಹೆಸರಿನಲ್ಲಿ ಡಿಸೆಂಬರ್ 23ರಂದು ಸುರೇಶ ಪಾಟೀಲರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಈ ಬೆಳವಣಿಗೆಯನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋದ ದಾನಪ್ಪ ಹುಲಜತ್ತಿಗೆ ಇದೀಗ ನ್ಯಾಯಾಲಯದಿಂದ ‘ಯಥಾಸ್ಥಿತಿ’ ಆದೇಶ ಸಿಕ್ಕಿದ್ದು, ಇದರ ಪರಿಣಾಮವಾಗಿ ಅವರು ಮತ್ತೆ ಅಧ್ಯಕ್ಷ ಸ್ಥಾನ ಮುಂದುವರಿಸುವಂತಾಗಿದೆ.
ಇದನ್ನೂ ಓದಿ: ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ
ಮೂರು ತಿಂಗಳಲ್ಲಿ ಮೂರು ಬಾರಿ ಅಧಿಕಾರ ಬದಲಾವಣೆ: ಈ ಮೊದಲು ಅಧ್ಯಕ್ಷ ಸ್ಥಾನಕ್ಕಾಗಿ ಸುರೇಶ ಪಾಟೀಲ ಮತ್ತು ದಾನಪ್ಪ ಹುಲಜತ್ತಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಮಾಜಿ ಸಚಿವೆ ಉಮಾಶ್ರೀ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದ ದಾನಪ್ಪ ಹುಲಜತ್ತಿ ಮೊದಲ ಹಂತದಲ್ಲಿ ಮೇಲುಗೈ ಸಾಧಿಸಿದ್ದರು. ಬಳಿಕ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರ ಬಳಗದಲ್ಲಿದ್ದ ಸುರೇಶ ಪಾಟೀಲರಿಗೆ ಅಧ್ಯಕ್ಷ ಸ್ಥಾನ ಒಲಿಯಿತು. ಇದೀಗ ನ್ಯಾಯಾಲಯದ ಆದೇಶದಿಂದ ಮತ್ತೊಮ್ಮೆ ದಾನಪ್ಪ ಹುಲಜತ್ತಿಗೆ ಅವಕಾಶ ದೊರೆತಿದ್ದು, ಮೂರು ತಿಂಗಳಲ್ಲಿ ಮೂರನೇ ಬಾರಿ ಅಧ್ಯಕ್ಷ ಸ್ಥಾನ ಕೈಬದಲಾದಂತಾಗಿದೆ.
ಮುಖಂಡರ ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ (ತೇರದಾಳ), “ಅಧ್ಯಕ್ಷ ಸ್ಥಾನವನ್ನು ಸರ್ಕಾರ ಬದಲಿಸಿಲ್ಲ. ನ್ಯಾಯಾಲಯದಿಂದ ಯಥಾಸ್ಥಿತಿ ಆದೇಶ ಬಂದಿದೆ. ಒಂದು ತಿಂಗಳ ಅವಧಿ ನಂತರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಅಧ್ಯಕ್ಷ ಸ್ಥಾನ ಮುಂದುವರೆಯಲಿದೆ” ಎಂದು ಹೇಳಿದರು.
ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ದಾನಪ್ಪ ಹುಲಜತ್ತಿ ಮಾತನಾಡಿ, “ಪಕ್ಷದ ಶಿಸ್ತಿನ ಸಿಪಾಯಿಯಾಗಿ ದುಡಿದ ಫಲವಾಗಿ ಅಧ್ಯಕ್ಷ ಸ್ಥಾನ ದೊರಕಿದೆ. ಇದಕ್ಕೆ ಕಾರಣರಾದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು” ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಸುರೇಶ ಪಾಟೀಲ ಅವರು, “ಸರ್ಕಾರ ನನಗೆ ಅಧ್ಯಕ್ಷ ಸ್ಥಾನ ನೀಡಿತ್ತು. ಇದೀಗ ನ್ಯಾಯಾಲಯದ ಆದೇಶದಂತೆ ತಾತ್ಕಾಲಿಕವಾಗಿ ಹುಲಜತ್ತಿಯವರು ವಾಪಸ್ ಬಂದಿದ್ದಾರೆ. ನಾನು ಕಾನೂನಿಗೆ ತಲೆಬಾಗುತ್ತೇನೆ. ಆದರೆ ಇದರ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ, ರಬಕವಿ–ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ರಾಜಕೀಯ ಗೊಂದಲದ ಕೇಂದ್ರಬಿಂದುವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಪಕ್ಷ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.























